ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರಕ್ಕೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಿಗದಿ ಮಾಡಲಾಗಿರುವ ಸ್ಥಳಗಳ ಪರಿಶೀಲನೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡ ಏ.7ರಿಂದ 9ರೊಳಗೆ ರಾಜ್ಯಕ್ಕೆ ಆಗಮಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಗುರುತಿಸಲಾಗಿದೆ. ಅವುಗಳ ಕಾರ್ಯ ಸಾಧ್ಯತಾ ಅಧ್ಯಯನಕ್ಕೆ ಎಎಐ ತಂಡ ರಾಜ್ಯಕ್ಕೆ ಬರಲಿದೆ ಎಂದರು.
ಅಂತಿಮಪಡಿಸಿರುವ ಸ್ಥಳಗಳನ್ನು ಪರಿಶೀಲಿಸುವಂತೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಮಾ.5ರಂದು ಪತ್ರ ಬರೆಯಲಾಗಿತ್ತು. ಅದರಂತೆ ಎಎಐನ ತಂಡವು ರಾಜ್ಯಕ್ಕೆ ಬರುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಎಎಐಗೆ ₹1.21 ಕೋಟಿ ಶುಲ್ಕ ಪಾವತಿಸಿದೆ ಎಂದರು.