ಆಮ್‌ ಆದ್ಮಿ ಪಾರ್ಟಿ ವಿಚಾರದಲ್ಲಿ ಶ್ರೀಮಂತ: ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌

ಹೊಸದಿಗಂತ ಡಿಜಿಟಲ್ ಡೆಸ್ಕ್

ಆಮ್‌ ಆದ್ಮಿ ಪಾರ್ಟಿ ಸೇರಿರುವ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಇಂದು ಮಾಧ್ಯಮಗಳ ಜೊತೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲ ಹಣವು ಭ್ರಷ್ಟ ರಾಜಕಾರಣಿಗಳ ಪಾಲಾಗುತ್ತಿದೆ. ಆಳುವ ರಾಜಕಾರಣಿಗಳು ಸಾಮಾನ್ಯ ಜನರ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಎನ್ನುವುದನ್ನು ಕೋವಿಡ್‌ ಸಂದರ್ಭದಲ್ಲಿ ಗಮನಿಸಿದ್ದೇನೆ. ಸರ್ಕಾರದ ಬೊಕ್ಕಸದಿಂದ ಲಕ್ಷ ಕೋಟಿ ರೂಪಾಯಿ ಖರ್ಚಾಗುತ್ತಿದ್ದರೂ, ಜನರಿಗೆ ಮಾತ್ರ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಬೇರೆ ಪಕ್ಷಗಳಿಗೂ ಆಮ್‌ ಆದ್ಮಿ ಪಾರ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಬೇರೆ ಪಕ್ಷಗಳು ಹಾಗೂ ಅವುಗಳ ನಾಯಕರು ಹಣಬಲದಲ್ಲಿ ಮಾತ್ರ ಶ್ರೀಮಂತರಾಗಿದ್ದಾರೆ. ನೈತಿಕತೆಯಲ್ಲಿ ಅವರೆಲ್ಲ ಬಡವರು. ಆದರೆ ಆಮ್‌ ಆದ್ಮಿ ಪಾರ್ಟಿಯು ವಿಚಾರದಲ್ಲಿ ಶ್ರೀಮಂತವಾಗಿದೆ. ಪ್ರಾಮಾಣಿಕತೆ ಹಾಗೂ ಸ್ವಚ್ಛ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡುವ ನೈತಿಕತೆಯನ್ನು ಎಎಪಿ ಉಳಿಸಿಕೊಂಡಿದೆ ಎಂದು ಭಾಸ್ಕರ್‌ ರಾವ್‌ ತಿಳಿಸಿದರು.

ದೆಹಲಿಯ ಆಮ್‌ ಆದ್ಮಿ ಪಾರ್ಟಿ ಸರ್ಕಾರವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರಿಂದಲೇ, ಅಲ್ಲಿ ಭಾರಿ ಪ್ರಮಾಣದ ಹಣ ಉಳಿತಾಯವಾಯಿತು. ಅದನ್ನು ಜನರ ಕಲ್ಯಾಣಕ್ಕೆ ಅಲ್ಲಿನ ಸರ್ಕಾರ ಬಳಸಿಕೊಂಡಿತು. ವಿದ್ಯುತ್‌, ಗುಣಮಟ್ಟದ ಶಿಕ್ಷಣ, ಕುಡಿಯುವ ನೀರು, ಸಾರಿಗೆ ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ಕೊಡುವುದರಲ್ಲಿ ದೆಹಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ , ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ, ರಾಜ್ಯ ಸಂಘಟನಾ ಪ್ರಮುಖ ಡಾ. ದಾಮೋದರನ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ್‌ ಶರ್ಮ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಮತ್ತಿತರ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!