ಅವಿವಾಹಿತೆ ಎಂಬ ಕಾರಣಕ್ಕೆ ಗರ್ಭಪಾತ ನಿರಾಕರಿಸುವ ಹಾಗಿಲ್ಲ: ಸುಪ್ರೀಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

25 ವರ್ಷದ ಅವಿವಾಹಿತೆಗೆ ತನ್ನ 24 ವಾರಗಳ ಗರ್ಭವನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ಅಲ್ಲದೆ, ದಿಲ್ಲಿ ಹೈಕೋರ್ಟ್, ವೈದ್ಯಕೀಯ ಗರ್ಭಪಾತ ನಿಯಮಗಳ ಅಂಶಗಳಲ್ಲಿನ ನಿಬಂಧಗಳನ್ನು ನ್ಯಾಯಸಮ್ಮತವಾಗಿ ಪರಿಗಣಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದೇ ವೇಳೆ, ಏಮ್ಸ್ ವೈದ್ಯಕೀಯ ಮಂಡಳಿಯ ನಿಯಮಗಳಿಗೆ ಅನುಗುಣವಾಗಿದ್ದರೆ ಆಕೆಯ ಗರ್ಭಪಾತ ಮಾಡಬಹುದು ಎಂದು ಅದು ಮಹತ್ವದ ಮಧ್ಯಂತರ ತೀರ್ಪು ನೀಡಿದೆ. ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಗೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆಯ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಭ್ರೂಣವನ್ನು ತೆಗೆಯಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ದಿಲ್ಲಿಯ ಏಮ್ಸ್ ರಚಿಸಿರುವ ವೈದ್ಯಕೀಯ ಮಂಡಳಿಗೆ ಅನುಮತಿ ನೀಡಲಾಗಿದೆ

2021ರ ತಿದ್ದುಪಡಿ ವೇಳೆ ವೈದ್ಯಕೀಯ ಗರ್ಭಪಾತ ಕಾಯ್ದೆಯಲ್ಲಿನ ಸೆಕ್ಷನ್ 3ರ ವಿವರಣೆಯಲ್ಲಿ ’ಗಂಡ’ ಎಂಬ ಬದಲು ’ಸಂಗಾತಿ’ ಎಂಬ ಪದ ಬಳಸಲಾಗಿದೆ. ಇದು ಈ ಕಾಯ್ದೆಯಲ್ಲಿ ಅವಿವಾಹಿತ ಮಹಿಳೆಯನ್ನು ಕೂಡ ಒಳಗೊಳ್ಳಲು ಇರುವ ಶಾಸನದ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಹೇಳಿದೆ. ಇನ್ನು ಜುಲೈ 16ರಂದು ದೆಹಲಿ ಹೈಕೋರ್ಟ್, 23 ವಾರಗಳ ಭ್ರೂಣವನ್ನು ಗರ್ಭಪಾತ ಮಾಡುವ ಮನವಿಯನ್ನು ಸ್ವೀಕರಿಸಲು ನಿರಾಕರಿಸಿತ್ತು. ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!