ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು:
ಕೊರೋನಾ ಸಂದರ್ಭದಲ್ಲಿ ಮುಂಚೂಣಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪೌರಕಾರ್ಮಿಕರು, ಗ್ರಾ.ಪಂ.ಸಿಬ್ಬಂದಿಗಳು ಸೇರಿದಂತೆ ಹಲವರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ವೈಯಕ್ತಿಕವಾಗಿ ಆಹಾರ ಕಿಟ್ ಗಳನ್ನು ವಿತರಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಡಗದಾಳು, ಮೂರ್ನಾಡು, ಹೊದ್ದೂರು, ಗಾಳಿಬೀಡು, ಕೆ.ನಿಡುಗಣೆ ಮತ್ತು ಮಕ್ಕಂದೂರು ಗ್ರಾಮಗಳಲ್ಲಿ ಸುಮಾರು 615 ಕೊರೋನಾ ಸೈನಿಕರಿಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಮೂರ್ನಾಡು ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು, ಕೊರೋನಾ 2 ನೇ ಅಲೆ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪೌರಕಾರ್ಮಿಕರು, ಗ್ರಾ.ಪಂ. ಸಿಬ್ಬಂದಿಗಳು, ಹೀಗೆ ಹಲವರು ಸೈನಿಕರಂತೆ ಕರ್ತವ್ಯ ನಿರ್ವಹಿಸಿದ್ದಾರೆ.
ಹಾಗೆಯೇ ಕೋವಿಡ್ ಪಾಸಿಟಿವ್ ಬಂದ ಬಡ ಕುಟುಂಬದವರಿಗೆ ಕೈಲಾದ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ವೈಯಕ್ತಿಕವಾಗಿ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆಯಿಂದ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಸದ್ಯ ಈಗ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿದೆ. ಆದರೂ ಸದಾ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.
ಕೋವಿಡ್-19 ಹರಡದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಸದ್ಯ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿದೆ ಎಂದು ಮೈ ಮರೆಯಬಾರದು. ಸದಾ ಎಚ್ಚರವಹಿಸಿದರೆ ಮಾತ್ರ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ.ಗಳಲ್ಲಿ ವೈಯಕ್ತಿಕವಾಗಿ ಸುಮಾರು 20 ರಿಂದ 22 ಲಕ್ಷ ರೂ. ವೆಚ್ಚದಲ್ಲಿ ಆಹಾರ ಕಿಟ್ ವಿತರಿಸಲು ಪ್ರಯತ್ನಿಸಿರುವುದಾಗಿ ಅಪ್ಪಚ್ಚುರಂಜನ್ ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎ.ಹರೀಶ್ ಅವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಸೈನಿಕರಾಗಿ ದುಡಿದವರಿಗೆ ಶಾಸಕರು ವೈಯಕ್ತಿಕವಾಗಿ ಆಹಾರ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಪ್ರಮುಖರಾದ ಬೆಲ್ಲು ಸೋಮಯ್ಯ ಅವರು ಮಾತನಾಡಿ, ಮಡಿಕೇರಿ ವಿಧಾನಸಬಾ ಕ್ಷೇತ್ರದ ಶಾಸಕರು ಶ್ರೀಸಾಮಾನ್ಯರಿಗೆ ಸ್ಪಂದಿಸುವಲ್ಲಿ ಸದಾ ಸಿದ್ಧರಾಗಿದ್ದಾರೆ. ಆ ದಿಸೆಯಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ ಎಂದರು.
ಮೂರ್ನಾಡು ಗ್ರಾ.ಪಂ.ಅಧ್ಯಕ್ಷೆ ಬಿ.ಸಿ.ಸುಜಾತ, ಉಪಾಧ್ಯಕ್ಷೆ ಮುಂಡಂಡ ವಿಜಯಲಕ್ಷ್ಮಿ, ಪ್ರಮುಖರಾದ ಕಾಂಗೀರ ಸತೀಶ್, ಪಳಂಗಂಡ ಅಪ್ಪಣ್ಣ, ಪಿಡಿಒ ಕೆ.ಎಂ.ಚಂದ್ರಮೌಳಿ, ಗ್ರಾ.ಪಂ. ಸದಸ್ಯರು ಮತ್ತಿತರರು ಇದ್ದರು.