ಸಂಸಾರ, ಶರೀರ, ಭೋಗದಿಂದ ಭವ್ಯಾತ್ಮ ವಿರಕ್ತ: ಮುನಿಶ್ರೀ ದಿವ್ಯಸಾಗರ ಮಹಾರಾಜ

ಹೊಸದಿಗಂತ ವರದಿ ಬಂಟ್ವಾಳ:

ಸಂಸಾರ, ಶರೀರ ಮತ್ತು ಭೋಗದಿಂದ ಭವ್ಯಾತ್ಮ ವಿರಕ್ತವಾಗುತ್ತದೆ. ಇದರಿಂದ ಆತ್ಮವನ್ನು ಅರಿತುಕೊಂಡು ಕಲ್ಯಾಣ ಮಾರ್ಗದಲ್ಲಿ ಸಾಗುತ್ತದೆ. ರತ್ನತ್ರಯ ಧಾರಣೆಯಿಂದ ಆತ್ಮ ಕಲ್ಯಾಣವಾಗುತ್ತದೆ. ಈ ಭುವಿಯಲ್ಲಿ 24 ತೀರ್ಥಂಕರರ ಉಪದೇಶಗಳಿಂದ ಮೋಕ್ಷ ಮಾರ್ಗ ದೊರಕುತ್ತದೆ ಎಂದು ಮುನಿಶ್ರೀ 108 ದಿವ್ಯಸಾಗರ ಮಹಾರಾಜ ಹೇಳಿದರು.

ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗದ `ಪಿಂಛಿ ಪರಿವರ್ತನಾ ಮಹೋತ್ಸವ’ ಸಮಾರಂಭದಲ್ಲಿ ಪಿಂಛಿ ಸ್ವೀಕರಿಸಿ ಮಂಗಲ ಪ್ರವಚನ ನೀಡಿದರು. ಸಾಧುಗಳ ಬಳಿಯಿರುವ ನವಿಲಿನ ಗರಿಗಳಿಂದ ಸಿದ್ಧಪಡಿಸುವ ಪಿಂಛಿ ಸಂಯಮದ ಪ್ರತೀಕ. ಪಿಂಛಿ ಕೈಯಲ್ಲಿದ್ದರೆ ಸಂಸಾರದ ಸರ್ವಶ್ರೇಷ್ಠ ವಸ್ತು ಕೈಯಲ್ಲಿ ಇದ್ದ ಹಾಗೆ ಆಗುತ್ತದೆ. ಇದು ಸಮಾಜಕ್ಕೆ ಸಂಯಮದ ಸಂದೇಶ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ, ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಇಂದಿನ ಹಾಗೂ ಹಿಂದಿನ ಚಾತುರ್ಮಾಸ ಅಜಿಲ ಸೀಮೆಯಲ್ಲೇ ನಡೆದಿರುವುದು ಸಂತಸ ನೀಡಿದೆ. ಅಜ್ಜಿಬೆಟ್ಟು ಬಸದಿಯಲ್ಲಿ ಇದೀಗ ಪಿಂಛಿ ಪರಿವರ್ತನಾ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ, ಕಂಬದಹಳ್ಳಿಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಎನ್.ಆರ್. ಪುರದ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಮಂಡ್ಯದ ಆರತಿಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಚಾತುರ್ಮಾಸ ಸಮಿತಿಯ ಗೌರವಾಧ್ಯಕ್ಷ ಉದಯ ಕುಮಾರ್ ಕಟ್ಟೆಮನೆ, ಅಧ್ಯಕ್ಷ ಜಿರಂಜನ ಜೈನ್ ಇರ್ವತ್ತೂರು ಗುತ್ತು, ಖಜಾಂಚಿ ವೃಷಭ ಕುಮಾರ ಇಂದ್ರ, ಅರುಣ ಕುಮಾರ ಇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸುಜೀತ್ ಕುಮಾರ್ ಜೈನ್ ವರದಿ ಮಂಡಿಸಿದರು. ಅಜ್ಜಿಬೆಟ್ಟು ಬಸದಿಯ ಆಡಳಿತ ಮಂಡಳಿಯ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸ್ವಾಗತಿಸಿದರು. ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಕೃತಿಗಳ ಲೋಕಾರ್ಪಣೆ
ಹಿರಿಯ ಜೈನ ಸಾಹಿತಿ ಇರ್ವತ್ತೂರು ಬೀಡು ವಿಜಯ ಜಿ. ಜೈನ್ ಅವರು ದ್ವಾದಶಾನುಪೇಕ್ಷೆ ಮತ್ತು ಸ್ವಾಮಿ ಸಮಂತಭದ್ರ ಆಚಾರ್ಯ ರಚಿಸಿರುವ ಬೃಹತ್ ಸ್ವಯಂಭೂ ಸ್ತೋತ್ರದ ತುಳು ಅನುವಾದಿತ ಕೃತಿಯನ್ನು ಮುನಿಶ್ರೀ 108 ದಿವ್ಯಸಾಗರ ಮಹಾರಾಜರು ಈ ಸಂದರ್ಭ ಬಿಡುಗಡೆ ಮಾಡಿದರು. ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಡಾ. ಜಯಮಾಲಾ ಎನ್. ಉಜಿರೆ ಪ್ರಕಾಶನದ ಸ್ವಾಮಿ ಜಿನಸೇನಾಚಾರ್ಯ ವಿರಚಿತ ಶ್ರೀ ಸಾರ್ಥ ಜಿನಸಹಸ್ರನಾಮಾದಿ ಸ್ತ್ರೋತ್ರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!