ಸಿಎಂ ಬೊಮ್ಮಾಯಿಗೆ ಅವಾಚ್ಯ ಶಬ್ಧಗಳ ಬಳಸಿ ನಿಂದನೆ: ಶಾಸಕ ಓಲೇಕಾರ ಬಂಧನಕ್ಕೆ ಆಗ್ರಹ

ಹೊಸ ದಿಗಂತ ವರದಿ, ಹಾವೇರಿ :

ಬಿಜೆಪಿ ಟಿಕೆಟ್ ತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರಮುಖ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ಅಸಂವಿಧಾನಿಕವಾದ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಭಾನುವಾರ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನೆಯನ್ನು ಪ್ರಾರಂಭಿಸಿದ ಪ್ರತಿಭಟನಾಕಾರರು ನಗರದ ಮುಖ್ಯ ಮಾರುಕಟ್ಟೆ ರಸ್ತೆ, ಗಾಂಧಿ ವೃತ್ತದ ಮೂಲಕ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಸೇರಿ ಕೆಲ ಕಾಲ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ರಾಜ್ಯದ ಮುಖ್ಯಮಂತ್ರಿ ಅವರನ್ನಲ್ಲದೆ ಅವರ ತಾಯಿ ಅವರಿಗೂ ಅವಾಚ್ಚ ಶಬ್ಧಗಳಿಂದ ನಿಂದಿಸಿರುವ ಶಾಸಕ ನೆಹರು ಓಲೇಕಾರ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಗಡಿ ಪಾರು ಮಾಡಬೇಕೆಂದು ಆಗ್ರಹಿಸಿದರು.

ಪಕ್ಷದ ಟಿಕೆಟ್ ದೊರೆಯದಕ್ಕೆ ಕಾರಣೀಕರ್ತರಾದವರಿಗೆ ಟೀಕೆ ಟಿಪ್ಪಣೆಗಳನ್ನು ಮಾಡಲಿ, ಆದರೆ ಅಸಂವಿಧಾನಿಕ ಶಬ್ಧಗಳ ಬಳಕೆ ಮಾಡಿದ್ದು ಯಾರಿಗೂ ಶೋಭೆ ತರುವಂತಹುದಲ್ಲ. 3 ಬಾರಿ ಶಾಸಕರಾಗಿ 2 ಬಾರಿ ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನೆಹರು ಓಲೇಕಾರ ಅವರು ಈ ರೀತಿ ಮಾತನಾಡಿದ್ದು ಅವರ ಘನತೆಗ ತಕ್ಕುದಾದಲ್ಲ ಎಂದು ಖಂಡಿಸಿದರಲ್ಲದೆ ಅವರು ನಾಡಿನ ಜನತೆಯನ್ನು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಎಂದು ಒತ್ತಾಯಿಸಿದರು.

ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ತಾಯಿ ಹೆಸರಿಗೆ ಓಲೇಕಾರ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹ ಮಾಡಿದರು.

ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಾರ್ವಜನಿಕವಾಗಿ ಯಾವ ರೀತಿ ಇರಬೇಕು ಅನ್ನುವ ಸಾಮಾನ್ಯ ಪ್ರಜ್ಞೆ ಇರಬೇಕು. ಈ ರೀತಿ ಮಾತನಾಡಿರುವುದನ್ನು ರಾಜ್ಯದ ಜನ ಕ್ಷಮಿಸಲ್ಲ. ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು. ತಕ್ಷಣ ಅವರ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ , ಕೆ.ಎಂ.ಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ಮಾಜಿಶಾಸಕ ಶಿವರಾಜ ಸಜ್ಜನರ ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ, ಮುಖಂಡರಾದ ವೆಂಕಟೇಶ ನಾರಾಯಣಿ, ಕೆ.ಬಿ.ಮಲ್ಲಿಕಾರ್ಜುನ, ಮುತ್ತಣ್ಣ ಯಲಿಗಾರ, ಜಗದೀಶ್ ಬಸೇಗಣ್ಣಿ, ಪ್ರಕಾಶ ಹಾವೇರಿ, ನ್ಯಾಯವಾದಿ ಎನ್.ಎಸ್.ಪಾಟೀಲ್, ಸುರೇಶ ಹೊಸಮನಿ, ಎಸ್.ಎಂ.ಕೋತಂಬರಿ, ಸುರೇಶ ಮುರಡಣ್ಣವರ, ವಿರುಪಾಕ್ಷಪ್ಪ ಕಡ್ಲಿ, ಪುಟ್ಟಪ್ಪ ಚನ್ನಮ್ಮನವರ, ಸುರೇಶ ದೊಡ್ಮನಿ, ವಿಜಯಕುಮಾರ ಚಿನ್ನಿಕಟ್ಟಿ, ದಲಿತ ಮುಖಂಡರಾದ ಉಡಚಪ್ಪ ಮಾಳಗಿ, ಸುಭಾಸ ಬೆಂಗಳೂರ ಸೇರಿದಂತೆ ಜಿಲ್ಲೆಯ ಅನೇಕರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!