ಮಂಗಳೂರಿನ ಮೆಸ್ಕಾಂ ಇಂಜಿನಿಯರ್, ಗದಗದ ಉಪತಹಸೀಲ್ದಾರ್ ಮನೆ ಮೇಲೆ ಎಸಿಬಿ ರೈಡ್

ಹೊಸದಿಗಂತ ವರದಿ
ಮಂಗಳೂರು: ನಗರದಲ್ಲಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರ ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ಬುಧವಾರ ಎಸಿಬಿ ದಾಳಿ ನಡೆದಿದೆ.
ಮೆಸ್ಕಾಂ ಎಇಇ ದಯಾಲು ಸುಂದರ್ ರಾಜ್ ಅವರ ಮಲ್ಲಿಕಟ್ಟೆಯಲ್ಲಿರುವ ವಿಜಯ ಅಪಾರ್ಟ್‌ಮೆಂಟ್ ನ 102 ನಂಬರ್ ಬಾಡಿಗೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಕದ್ರಿಕಂಬಳದಲ್ಲಿ ಸ್ವಂತ ಮನೆಯಿದ್ದರೂ ದಯಾಲು ಸುಂದರ್ ರಾಜ್ ಈ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ. ಮಂಗಳೂರು ಎಸಿಬಿ ಎಸ್ಪಿ ಸಿ.ಎ.ಸೈಮನ್ ತಂಡ ಮತ್ತು ಕಾರವಾರ ಎಸಿಬಿ ತಂಡ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದೆ.
ಎಸಿಬಿ ಅಧಿಕಾರಿಗಳು ಮನೆ ಹಾಗೂ ಕಚೇರಿಗೆ ದಾಳಿ ನಡೆಸಿ ಕಡತಗಳು, ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.ಸುಂದರ್ ರಾಜ್ ಅವರು ಕಳೆದ 10 ವರ್ಷಗಳಿಂದ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ಮೆಸ್ಕಾಂ ಕಚೇರಿಯಲ್ಲಿ ಎಸಿಬಿ ದಾಳಿ ವೇಳೆ ಎಇಇ ದಯಾಲು ಸುಂದರ್ ರಾಜ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಗದಗದಲ್ಲಿ ಉಪ ತಹಸೀಲ್ದಾರ್ ಮನೆ ಮೇಲೆ ದಾಳಿ!
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಬಿ.ಎಸ್.ಅಣ್ಣಿಗೇರಿ ಅವರ ಮನೆ ಹಾಗೂ ಕಚೇರಿ ಮೇಲೆ ಬುಧವಾರ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಂಚಾಕ್ಷರಿ ನಗರದಲ್ಲಿರುವ ಮನೆ, ಅಳಿಯನ ಮನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಉಪ ತಹಸೀಲ್ದಾರ್ ಚೇಂಬರ್ ಮೇಲೆ ಬುಧವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಣ್ಣಿಗೇರಿ ಅವರಿಗೆ ಸೇರಿದ್ದು ಎನ್ನಲಾದ ಟಾಂಗಾಕೂಟದಲ್ಲಿರುವ ಖಾಸಗಿ ಕಂಪನಿಯೊಂದರ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಕುರಿತು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗದಗ ಭ್ರಷ್ಟಾಚಾರ ನಿಗ್ರಹ ದಳ ಡಿಎಸ್ಪಿ ಮಲ್ಲಾಪುರ ಅವರ ನೇತೃತ್ವದ ಎರಡು ತಂಡಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!