ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಕಂಡುಬಂದಿರುವ ಡೆಲ್ಟಾ ಪ್ಲಸ್ ಕೊರೋನಾ ಮೇಲೆ ನಿಗಾ ಇಟ್ಟುಕೊಂಡು ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಇಂದು ತಿಳಿಸಿದರು.
ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವೆಡೆ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ಈ ನಡುವೆ ಜನರು ಸಾಮಾಜಿಕ ಅಂತರ ಪಾಲಿಸಿಕೊಂಡು, ಶಿಸ್ತು ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಮಾತನಾಡಿದ ಅವರು, ಈ ರೂಪಾಂತರಿ ವೈರಾಣು ಮಾರ್ಚ್ನಿಂದ ಕಂಡುಬಂದಿದೆ. ಈ ರೂಪಾಂತರಿ ಈಗ ಆಸಕ್ತಿ ಹುಟ್ಟಿಸಿರುವ ವೈರಾಣು ಅಷ್ಟೇ. ಆದರೆ ಈ ಬಗ್ಗೆ ಆತಂಕ ಬೇಕಾಗಿಲ್ಲ. ವೈರಸ್ ಹರಡುವಿಕೆ ಪ್ರಮಾಣ ಈಗ ಬಹಳಷ್ಟು ಕಡಿಮೆಯಾಗಿದೆ. ಸಣ್ಣ ವಲಯಗಳಲ್ಲಿ ಕೊರೋನಾ ನಿಯಂತ್ರಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿಯ ವೈರಾಣು ಬಗ್ಗೆ ಹೆಚ್ಚು ಜಾಗೃತಿಬೇಕು ಎಂದು ತಿಳಿಸಿದರು.
ಈ ವೇಳೆ ನೊವಾವಾಕ್ಸ್ ಲಸಿಕೆಯ ಬಗ್ಗೆ ಮಾತನಾಡಿದ ಪೌಲ್, ಈಗಿರುವ ಅಧ್ಯಯನದ ವರದಿಯಂತೆ ನೊವಾವಾಕ್ಸ್ ಲಸಿಕೆಯು ಬಹಳ ಸುರಕ್ಷ ಹಾಗೂ ಪರಿಣಾಮಕಾರಿ ಆಗಿದೆ. ನೊವಾವಾಕ್ಸ್ ಲಸಿಕೆಯನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಳು ಈ ಬಗ್ಗೆ ನಡೆಯುತ್ತಿದೆ ಎಂದು ಹೇಳಿದರು.
ಆರೋಗ್ಯ ಸಚಿವಾಲಯದ ಸಹ ಕಾರ್ಯದರ್ಶಿ ಲವ್ ಅಗರ್ವಾಲ್ ಮಾತನಾಡಿ, ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಸುಮಾರು 65 ದಿನಗಳ ಬಳಿಕ, ಕೊವಿಡ್ ಪ್ರಕರಣಗಳ ಸಂಖ್ಯೆ 65 ಲಕ್ಷಕ್ಕಿಂತ ಕಡಿಮೆ ಇದೆ. ಸದ್ಯ 9.13 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಈಗಾಗಲೇ ಪತ್ತೆಯಾಗಿರುವ ಬಿ.1.617.2 ರೂಪಾಂತರಿ ಪ್ರಭೇದದ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ವೈರಸ್ ಎಂದು ಹೆಸರಿಟ್ಟಿದೆ. ಹೊಸ ಪ್ರಭೇದದ ವೈರಸ್ ಗಳನ್ನ ದೇಶಗಳ ಹೆಸರಿನಿಂದ ಕರೆಯುವುದು ಬೇಡ ಎಂಬ ಕಾರಣದಿಂದ ಡೆಲ್ಟಾ ಪ್ರಭೇದದ ವೈರಸ್ ಎಂದು ಹೆಸರಿಟ್ಟಿದೆ. ಆದರೆ, ಈಗ ಇದೇ ಡೆಲ್ಟಾ ಪ್ರಭೇದದ ವೈರಸ್ ಮತ್ತೆ ರೂಪಾಂತರಗೊಂಡಿದೆ. ರೂಪಾಂತರಗೊಂಡ ಹೊಸ ಪ್ರಭೇದದ ವೈರಸ್ ಗೆ ಡೆಲ್ಟಾ ಪ್ಲಸ್ ಅಥವಾ AY.1 ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಡೆಲ್ಟಾ ವೈರಸ್ ಪ್ರಭೇದವೇ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಕೊರೋನಾ ಎರಡನೇ ಅಲೆಯಲ್ಲಿ ಕೇಸ್ ಗಳು ಬಾರಿ ಸಂಖ್ಯೆಯಲ್ಲಿ ಏರಿಕೆಯಾಗಿದ್ದವು ಎಂದರು.