ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಖ್ಯಾತ ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪುಣೆಯಲ್ಲಿರುವ ಮಿಥುನ್ ಚಕ್ರವರ್ತಿ ಅವರನ್ನು ಉತ್ತರ ಕೊಲ್ಕೋತಾದ ಮಣಿಕ್ತಲಾ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದಾರೆ.
ಏಪ್ರಿಲ್- ಮೇ ತಿಂಗಳಲ್ಲಿ ಎಂಟು ಹಂತಗಳವರೆಗೆ ನಡೆದ ಚುನಾವಣೆಯಲ್ಲಿ ಮಿಥುನ್ ಚಕ್ರವರ್ತಿ ಅವರು ಬಿಜೆಪಿಯ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಅವರು ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಯು ಚುನಾವಣೆ ಬಳಿಕದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 7 ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ‘ನಾನು ನಾಗರಹಾವು. ಒಮ್ಮೆ ಕಚ್ಚಿದರೆ ಸಾಕು’ ಎಂದು ವಿರೋಧಿಗಳಿಗೆ ಮಾತಿನ ಬಾಣ ಬಿಟ್ಟಿದ್ದಾರೆ. ‘ನಿನಗೆ ಇಲ್ಲಿ ಹೊಡೆದರೆ, ನಿನ್ನ ದೇಹ ಚಿತಾಗಾರದಲ್ಲಿ ಹೋಗಿ ಬೀಳುತ್ತದೆ’ ಎಂಬ ತಮ್ಮದೇ ಸಿನಿಮಾ ಸಂಭಾಷಣೆಯನ್ನು ಅವರು ಹೇಳಿದ್ದರು.