ಹೊಸದಿಗಂತ ವರದಿ,ರಾಮನಗರ:
ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ರೂಪಿಸುವ ಕಾರ್ಯಕ್ರಮದ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಾಧಿಸುವುದಕ್ಕೆ ಮಾತ್ರ ಅಧಿಕರಿಗಳು ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ಒಂದು ಯೋಜನೆಯನ್ನು ಸರ್ಕಾರ ಅನಷ್ಠಾನಗೊಳಿಸಿದಾಗ ಅದರಿಂದ ರೈತರು, ಸಾರ್ವಜನಿಕರಿಗೆ ಆಗಿರುವ ಉಪಯುಕ್ತತೆಯ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರ ಅನುಷ್ಠಾನಗೊಳಿಸಿರುವ ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ರೈತರು ಯಾವ ರೀತಿ ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ಕೆಲವು ಸಂದರ್ಭದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಯೋಜನೆಯನ್ನು ಪಡೆದುಕೊಳ್ಳಲಾಗದವರು ಇರುತ್ತಾರೆ. ಅವರನ್ನು ಪತ್ತೆ ಹಚ್ಚಿ ಅರ್ಜಿ ಸಲ್ಲಿಸುವಂತೆ ಮಾಡಿ. ತುಂತುರು ಹಾಗೂ ಹನಿ ನೀರಾವರಿಯಿಂದ ಮಿತ ನೀರಿನ ಬಳಕೆ ಹಾಗೂ ಇಳುವರಿಯಲ್ಲಿ ಆಗಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಇನ್ನು ಮುಂದೆ ಹನಿ ನೀರಾವರಿ/ ತುಂತುರು ನೀರಾವರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ದಿಶಾ ಸಮಿತಿಯ ಸದಸ್ಯರ ಗಮನಕ್ಕೆ ತರುವಂತೆ ತಿಳಿಸಿದರು.
ಸರ್ಕಾರದ ಯೋಜನೆಗಳಿಂದ ಯಾವುದೇ ರೈತರು ವಂಚಿತರಾಗಬಾರದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಿಲ್ಲೆಯ ೨,೩೧,೦೦೦ ರೈತರು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೈತರು ಈ ಯೋಜನೆಗೆ ಅರ್ಹರಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಅವರು ಜಂಟಿಯಾಗಿ ಮನೆ, ಮನೆ ಸಮೀಕ್ಷೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ತಲುಪಿಸಬೇಕು ಎಂದರು.
ರೇಷ್ಮೆಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ರೇಷ್ಮೆ ನಗರಿ ಎಂದು ರಾಮನಗರ ಜಿಲ್ಲೆ ಹೆಸರಿಗೆ ಮಾತ್ರ ಸೀಮಿತವಾಗದೇ ಹೊಸ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ಎಫ್.ಪಿ.ಓ ಗಳಲ್ಲಿ ಕುಕೂನ್ ಡ್ರೈಯಿಂಗ್ ಯಂತ್ರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಇದರಿಂದ ರೇಷ್ಮೆ ಬೆಳೆಗಾರರು ಉತ್ತಮ ಬೆಲೆ ಇದ್ದ ಸಂದರ್ಭದಲ್ಲಿ ಮಾರಾಟ ಮಾಡಬಹುದು .
ಸಭೆಯಲ್ಲಿ ಶಾಸಕ ಎ.ಮಂಜುನಾಥ, ಜಿಲ್ಲಾಧಿಕಾರಿ ಡಾ:ರಾಕೇಶ್ ಕುಮಾರ್. ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪಸ್ಥಿತರಿದ್ದರು.