Wednesday, August 10, 2022

Latest Posts

ಕಂದಾಯ ಗ್ರಾಮಗಳನ್ನು ಮಾಡಲು ಕ್ರಮ: ಸಚಿವ ಆರ್.ಅಶೋಕ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ವರದಿ,ಚಿತ್ರದುರ್ಗ:

ಹಕ್ಕಿ ಪಿಕ್ಕಿ ಜನಾಂಗ, ಹಟ್ಟಿ, ತಾಂಡ ಮುಂತಾದ ಜನಾಂಗದವರು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಆದೇಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಹೊಸದುರ್ಗ ಪಟ್ಟಣದ ಶಿವನೆಕಟ್ಟೆ ಬಳಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೊಸದುರ್ಗ ತಾಲ್ಲೂಕಿನ ಈಗಾಗಲೇ ಜಿಲ್ಲೆಯಲ್ಲಿ ೨೭೯ ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, ೧೦೭ ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಹಟ್ಟಿಗಳಿಗೂ ಕಂದಾಯ ಗ್ರಾಮಗಳಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದರೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಸ್ಮಶಾನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ೧೨೪೩ ಗ್ರಾಮಗಳಿದ್ದು, ಅದರಲ್ಲಿ ೩೧೩ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಲಾಗಿದೆ. ಇನ್ನೂ ೩೩೩ ಹಳ್ಳಿಗಳಲ್ಲಿ ಸ್ಮಶಾನ ಜಾಗ ಮಂಜೂರು ಬಾಕಿ ಇದ್ದು, ಅದನ್ನು ಕೂಡ ಮಂಜೂರು ಮಾಡಲಾಗುವುದು. ಮನುಷ್ಯ ಬದುಕಿದ್ದಾಗ ಇದ್ದ ಗೌರವ ಸತ್ತ ನಂತರವು ಗೌರಯುತವಾಗಿ ಅಂತ್ಯ ಸಂಸ್ಕಾರವಾಗಬೇಕು. ಈ ನಿಟ್ಟಿನಲ್ಲಿ ಸ್ಮಶಾನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಹೊಸದುರ್ಗ ತಾಲ್ಲೂಕಿನಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ರೂ.೧೦ ಕೋಟಿ ಅನುದಾನ ಮಂಜೂರು ಮಾಡಿ ಆಧುನಿಕ ವ್ಯವಸ್ಥೆಯ ಸುಸಜ್ಜಿತವಾದ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿರುವುದು ಇಡೀ ತಾಲ್ಲೂಕು ಹೆಮ್ಮೆ ಹಾಗೂ ಸಂತೋಷ ಪಡುವಂತಹ ವಿಷಯವಾಗಿದೆ ಎಂದರು.
ಹೊಸದುರ್ಗ ಪಟ್ಟಣದಲ್ಲಿ ೧೦೦ ಅಡಿ ಬೈಪಾಸ್ ರಸ್ತೆ ನಿರ್ಮಾಣ ಹಾಗೂ ಹೊಸದುರ್ಗ ಪಟ್ಟಣಕ್ಕೆ ಹೊಂದಿಕೊಂಡಂತೆ ಉದ್ಯಾನವನ ನಿರ್ಮಾಣಕ್ಕೆ ೨೦ ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.
ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ತಾಲ್ಲೂಕಿನ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ರೂ.೧೦ ಕೋಟಿ ಅನುದಾನ ನೀಡುವುದರ ಜೊತೆಗೆ ಎಂಟು ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿ ವಾಸವಾಗಿರುವ ಹಕ್ಕಿಪಿಕ್ಕಿ, ಹಂದಿಜೋಗಿ, ಹೆಳವ ಜನಾಂಗದ ೪೦ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ೧೩ ಎಕರೆ ಜಮೀನನ್ನು ಆಶ್ರಯ ಮನೆ ಯೋಜನೆಗಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಪೌತಿ ಖಾತೆ ಸಂಬಂಧಿಸಿದ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಹೊಸದುರ್ಗ ತಾಲ್ಲೂಕಿನಲ್ಲಿ ಪೌತಿ ಖಾತೆ ಅಂದೋಲನ ಹಮ್ಮಿಕೊಂಡು ಪೌತಿ ಖಾತೆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ತಾಲ್ಲೂಕಿನಲ್ಲಿ ೨೦೧೨ರ ಹಿಂದೆ ಸರ್ಕಾರಿ ಜಾಗದಲ್ಲಿ ಅಕ್ರಮ ಸಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡರಿಗೆ ತಾತ್ಕಾಲಿಕವಾಗಿ ಹಕ್ಕು ಪತ್ರ ನೀಡುತ್ತಿದ್ದರು. ಆದರೆ ಈಗ ಅವರಿಗೆ ಮೂಲ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಕಂದಾಯ ಇಲಾಖೆ, ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸರ್ಕಾರಿ ಸವಲತ್ತುಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೊಸದುರ್ಗ ಪುರಸಭೆ ಅಧ್ಯಕ್ಷ ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ, ಮುಖಂಡರಾದ ಜಗದೀಶ್, ಗುರುಸ್ವಾಮಿ, ತಿಮ್ಮಣ್ಣ, ದೇವಿಶ್ರೀನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss