Thursday, August 11, 2022

Latest Posts

ಕಾರ್ಯಕರ್ತ ಯಾವತ್ತೂ ಅಧಿಕಾರ ದಾಹಕ್ಕಾಗಿ ಕೆಲಸ ಮಾಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಂಗಳೂರು:

ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಕೇವಲ ರಾಜಕೀಯ ಕಾರ್ಯಕರ್ತರಲ್ಲ. ಸಮಾಜದ ಮತ್ತು ದೇಶದ ಬಗ್ಗೆ ಚಿಂತನೆ ಮಾಡುವ ಕಾರ್ಯಕರ್ತ ಯಾವತ್ತೂ ಕೂಡಾ ಅಧಿಕಾರ ದಾಹಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದ ಸಂಘನಿಕೇತನದಲ್ಲಿ ಶನಿವಾರ ನಡೆದ ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ನಮ್ಮ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಯನ್ನು ಗೆಲ್ಲಿಸಿಕೊಡುವುದು ಮಾತ್ರವಲ್ಲ, ಸಂಕಷ್ಟದ ಸಮಯದಲ್ಲಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಶಕ್ತರಾಗಿದ್ದಾರೆ. ನಮ್ಮ ಕಾರ್ಯಕರ್ತರ ಬದ್ದತೆ, ಆದರ್ಶಗಳನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರಚಿಂತನೆಯ ಗುರಿಯೊಂದಿಗೆ ಬೇರೆ ಬೇರೆ ಪಕ್ಷದಿಂದ ಗಣ್ಯರು, ಕಾರ್ಯಕರ್ತರು ತಂಡೋಪತಂಡವಾಗಿ ನಮ್ಮ ಪಾರ್ಟಿಯನ್ನು ಸೇರಿಕೊಳ್ಳುತ್ತಿದ್ದಾರೆ ಎಂದರು.
ಆರ್ಥಿಕ ಪ್ರಕೋಷ್ಠದ ಸಂಚಾಲಕರಾಗಿ ಶಾಂತಾರಾಮ ಶೆಟ್ಟಿ, ಸಹ ಸಂಚಾಲಕರಾಗಿ ಎಸ್‌ಎಸ್ ನಾಯಕ್, ಪ್ರಕಾಶನ ಪ್ರಕೋಷ್ಠ ಸಂಚಾಲಕರಾಗಿ ಸುಜೀತ್‌ರಾಜ್ ಮೀನ, ಸಹ ಸಂಚಾಲಕರಾಗಿ ಅನಿದಿತ್ ಗೌಡ ಅವರನ್ನು ನೇಮಿಸಲಾಯಿತು. ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ನೆರವೇರಿಸಿದ ಮಂಗಳೂರಿನ ಪಾಲಿಕೆ ಸದಸ್ಯ ಗಣೇಶ ಕುಲಾಲ್, ಪುತ್ತೂರು ನಗರ ಮಂಡಲದ ಅಧ್ಯಕ್ಷ ಜಗನ್ನಿವಾಸ ರಾವ್ ಅವರನ್ನು ಅಭಿನಂದಿಸಲಾಯಿತು.
ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಸಹ ಪ್ರಭಾರಿ ರಾಜೇಶ್‌ಕಾವೇರಿ, ಶಾಸಕ ವೇದವ್ಯಾಸ್‌ಕಾಮತ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಬೆಳ್ತಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು.
ಉದ್ಘಾಟನೆ:
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್ ಸ್ವಾಗತಿಸಿದರು. ಅಗಲಿದ ದಿವ್ಯಚೇತನರಿಗೆ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್ ಅವರು ಶ್ರದ್ಧಾಂಜಲಿ ಸಮರ್ಪಿಸಿದರು. ಕೊರೋನಾ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅಭಿನಂಧನಾ ನಿರ್ಣಯವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಮಂಡಿಸಿದರು.
ಬಿಜೆಪಿಗೆ ಸೇರ್ಪಡೆ
ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಬೇಸತ್ತು ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್‌ಅಡಪ, ಉದಯ ಭಟ್, ಲೋಲಾಕ್ಷ, ಮೂಡಬಿದಿರೆಯ ಸತೀಶ್ ಸಾಲಿಯಾನ್ ಮುಂತಾದವರು ಬೆಂಬಲಿಗರೊಂದಿಗೆ ಈ ಸಂದರ್ಭ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss