ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘ಹೀರೋ’ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ‘ಹೀರೋ’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ, ರಿಷಬ್ ಶೆಟ್ಟಿ ಬೇಸರದಲ್ಲಿದ್ದಾರೆ.
ಹೌದು.. ಹೀರೋ ಸಿನಿಮಾ ಈಗ 3ನೇ ದಿನಕ್ಕೆ ಪೈರಸಿ ಆಗಿದ್ದು, ಈ ಬೆಳವಣಿಗೆ ಕುರಿತು ನಟ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಿನಿಮಾವು ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ. ಇಡೀ ಊರು ಮಲಗಿದ್ದಾಗ, ಪ್ರೇಕ್ಷಕರಿಗೆ ಮನರಂಜನೆ ಕೊಡಬೇಕು ಎಂಬ ದೃಷ್ಟಿಯಿಂದ ನಾವು ಸಿನಿಮಾ ಮಾಡಿದ್ದೆವು. ಸಿನಿಮಾ ಬಿಡುಗಡೆಯಾಗಿ 3ನೇ ದಿನಕ್ಕೆ ಪೈರಸಿಯಾಗಿದೆ. ಆ್ಯಂಟಿ ಪೈರಸಿ ಟೀಮ್ ಜೊತೆಗೆ ಕುಳಿತುಕೊಂಡು, ಅದೆಷ್ಟು ಲಿಂಕ್ಗಳನ್ನು ಕಿತ್ತುಹಾಕುತ್ತಿದ್ದರೂ, ಹೊಸದಾಗಿ ಬೇರೆ ಕಡೆ ಹುಟ್ಟಿಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರದೊಳಕ್ಕೆ ಮೊಬೈಲ್ಫೋನ್-ಕ್ಯಾಮರಾ ತೆಗೆದುಕೊಂಡು ಹೋಗಿ ಒಂದಿಡೀ ಸಿನಿಮಾ ರೆಕಾರ್ಡ್ ಮಾಡಿಕೊಳ್ಳಲು ಅದು ಹೇಗೆ ಸಾಧ್ಯ? ನಿಜಕ್ಕೂ ಇದು ಬೇಸರದ ಸಂಗತಿ. ಸರ್ಕಾರ ಯಾವ್ಯಾವುದೋ ಆಯಪ್ಗಳನ್ನು, ಪೋರ್ಟಲ್ಗಳನ್ನು ಬ್ಯಾನ್ ಮಾಡುತ್ತಿದೆ. ಪೈರಸಿ ಕಾಪಿಗಳನ್ನು ಹಾಕುವ ಇಂಥ ವೇದಿಕೆಗಳನ್ನು ಯಾಕೆ ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ರಿಷಬ್ ಶೆಟ್ಟಿ, ‘ದಯಮಾಡಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಪೈರಸಿ ಲಿಂಕ್ಗಳು ಕಂಡುಬಂದಲ್ಲಿ ಸೋಷಿಯಲ್ ಮೀಡಿಯಾಗ ಮೂಲಕ ತಮ್ಮ ಗಮನ ಸೆಳೆಯುವಂತೆಯೂ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ. ಆ ಮೂಲಕ ಅಂಥ ಲಿಂಕ್ಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ.
Corona ಸಮಯದಲ್ಲಿ ಸಿನೆಮಾ ಮೇಲಿನ ಪ್ರೀತಿಗಾಗಿ ಕೇವಲ 24 ಜನ ಸಿನಿಮಾ ಮಾಡಿಯಾಗಿದೆ .. ಚಿತ್ರಮಂದಿರಕ್ಕೆ ಬಿಟ್ಟಾಗಿದೆ.. ಇಂದಿಗೆ Piracy ಆಗಿದೆ.. ಇನ್ನು ನಮ್ದೇನಿದೆ. #StopPiracy #HeroTheFilm pic.twitter.com/MnD8HC1Ga7
— Rishab Shetty (@shetty_rishab) March 7, 2021