ಐದೇ ದಿನದಲ್ಲಿ 43 ಶೇಕಡಾ ಏರಿದೆ ಅದಾನಿ ಎಂಟರ್‌ಪ್ರೈಸಸ್‌ ಷೇರು: 1.42 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂಡೆನ್‌ಬರ್ಗ್‌ ತನಿಖಾ ವರದಿಯ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ್ದ ಅದಾನಿ ಕಂಪನಿಯ ಷೇರುಗಳು ಈ ವಾರ ಷೇರುಪೇಟೆಯಲ್ಲಿ ಏರಿಕೆ ದಾಖಲಿಸಿವೆ. ಅದಾನಿ ಸಮೂಹದ ಪ್ರಮುಖ ಘಟಕವಾದ ಅದಾನಿ ಎಂಟರ್‌ಪ್ರೈಸಸ್‌ ಷೇರುಗಳು ಕಳೆದ ಐದು ದಿನದಲ್ಲಿ 43 ಶೇಕಡಾ ಏರಿಕೆಯಾಗಿದ್ದು ಕಂಪನಿಯ ಬಂಡವಾಳ ಹರಿವನ್ನು ಉತ್ತೇಜಿಸಿದೆ. ಅದಾನಿ ಕಂಪನಿಯ ಕುರಿತಾಗಿ ಧನಾತ್ಮಕ ವಿಚಾರಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿದ್ದು ಕಳೆದ 5 ದಿನಗಳಿಂದ ಅದಾನಿ ಷೇರುಗಳು ಹಸಿರುಬಣ್ಣದಲ್ಲಿವೆ.

ಅದಾನಿ ವಿಲ್‌ಮಾರ್‌, ಅದಾನಿ ಪೋರ್ಟ್ಸ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಟೋಟಲ್‌ ಗ್ಯಾಸ್‌ ಸೇರಿದಂತೆ ಒಟ್ಟಾರೆಯಾಗಿ ಹತ್ತು ಕಂಪನಿಯ ಷೇರುಗಳ ಬೆಳವಣಿಗೆಯಿಂದಾಗಿ ಕಳೆದ 3 ಮಾರುಕಟ್ಟೆ ಅವಧಿಯಲ್ಲಿ ಬರೋಬ್ಬರಿ 1.42 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಸಂಗ್ರಹಣೆಯಾಗಿದೆ.

ಶುಕ್ರವಾರ ಒಂದೇ ದಿನ ಅದಾನಿ ಎಂಟರ್‌ಪ್ರೈಸಸ್‌ ಷೇರು 17 ಶೇಕಡಾ ಏರಿಕೆ ದಾಖಲಿಸಿದ್ದು ಮಾರುಕಟ್ಟೆ ಅಂತ್ಯದ ವೇಳೆ ಬಿಎಸ್‌ಇ ಯಲ್ಲಿ ಒಂದು ಷೇರಿನ ಬೆಲೆ 1,879.35 ರೂ.ಗೆ ತಲುಪಿದೆ. ಇದನ್ನು ಹೊರತು ಪಡಿಸಿ ಅದಾನಿ ಪೋರ್ಟ್ಸ್ ಶೇರುಗಳು 9.81 ರಷ್ಟು ಏರಿಕೆಯಾಗಿವೆ, ಅಂಬುಜಾ ಸಿಮೆಂಟ್ಸ್ ಶೇಕಡಾ 5.70, ಎಸಿಸಿ 5.11 ಶೇಕಡಾದಷ್ಟು ಮುನ್ನಡೆ ಸಾಧಿಸಿದೆ, ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 5, ಅದಾನಿ ಗ್ರೀನ್ ಎನರ್ಜಿ ಶೇಕಡಾ 5 ಮತ್ತು ಅದಾನಿ ಟೋಟಲ್ ಗ್ಯಾಸ್ ಶೇಕಡಾ 5 ರಷ್ಟು ಏರಿಕೆಯಾಗಿದೆ. ಅಲ್ಲದೇ ಅದಾನಿ ಪವರ್‌ ಷೇರುಗಳು ಶೇಕಡಾ 4.99, ಅದಾನಿ ವಿಲ್ಮಾರ್ ಶೇಕಡಾ 4.99 ಮತ್ತು ಎನ್‌ಡಿಟಿವಿ ಶೇಕಡಾ 4.98 ರಷ್ಟು ಏರಿಕೆ ದಾಖಲಿಸಿವೆ.

ಗುರುವಾರದಂದು ಹಿಂಡೆನ್‌ಬರ್ಗ್‌ ತನಿಖಾ ವರದಿಯಲ್ಲಿ ಆರೋಪಿಸಿರುವಂತೆ ಅದಾನಿ ಸಮೂಹದ ಮಾರುಕಟ್ಟೆ ಅಕ್ರಮಗಳಿಗೆ ಸಂಬಂಧಿಸಿದಂತೆ ವಿವರವಾಗಿ ತನಿಖೆ ಮಾಡುವಂತೆ 6 ಜನರ ಸಮಿತಿ ರಚಿಸಿ ಸುಪ್ರಿಂ ಕೋರ್ಟ್‌ ಆದೇಶಿಸಿತ್ತು. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ ಎಂ ಸಪ್ರೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ನಂದನ್ ನಿಲೇಕಣಿ, ಕೆವಿ ಕಾಮತ್ ಮತ್ತು ಸೋಮಶೇಖರನ್ ಸುಂದರೇಶನ್ ಸೇರಿದಂತೆ ಹಲವರು ಸಮಿತಿಯ ಭಾಗವಾಗಿದ್ದಾರೆ. ಎರಡು ತಿಂಗಳುಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಸುಪ್ರಿಂ ಕೋರ್ಟ್‌ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!