ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಂಗಳೂರು ವಿಮಾನ ನಿಲ್ದಾಣದ ನಾಮಫಲಕಗಳಿಂದ ಅದಾನಿ ಹೆಸರನ್ನು ಕಿತ್ತುಹಾಕಲಾಗಿದೆ ಎಂದು ಭಾನುವಾರ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಮೂಹ ಗುತ್ತಿಗೆಗೆ ಪಡೆದಿದೆ. ಅಲ್ಲೆಲ್ಲ ಮೂಲ ಹೆಸರಿನೊಂದಿಗೆ ನಾಮಫಲಕಗಳಲ್ಲಿ ಅದಾನಿ ಹೆಸರನ್ನೂ ಬಳಸುವ ಪ್ರಯತ್ನಗಳಾಗಿವೆ. ಈ ಬಗ್ಗೆ ಪ್ರತಿಭಟನೆಗಳೂ ಎದುರಾಗಿವೆ. ಮಂಗಳೂರಿನಲ್ಲಿ ಸಹ ಇದರ ವಿರುದ್ಧ ಅಭಿಯಾನಗಳಾಗಿದ್ದವು. ಇದೀಗ ಮಂಗಳೂರಿನ ವಿಮಾನ ನಿಲ್ದಾಣ ಫಲಕದಿಂದ ಅದಾನಿ ಹೆಸರು ಕಡಿತವಾಗಿರುವುದು ಉಳಿದೆಡೆಗಳಲ್ಲೂ ಈ ಮಾದರಿ ಪ್ರೇರೇಪಣೆ ನೀಡಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮಾರ್ಚ್ 2019ರಲ್ಲಿ ಅದಾನಿ ಸಮೂಹವು ಲಖನೌ, ಜೈಪುರ, ತಿರುವನಂತಪುರ, ಮಂಗಳೂರು, ಗುವಾಹಟಿ ಹಾಗೂ ಅಹಮದಾಬಾದುಗಳ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ನಿರ್ವಹಣೆ ಮಾಡುವ ಗುತ್ತಿಗೆಗಳನ್ನು ಹರಾಜಿನಲ್ಲಿ ಗೆದ್ದುಕೊಂಡಿತು. ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯೂ ಅದಾನಿ ಬಳಿಯೇ ಇದೆ.
ಭಾರತೀಯ ವಿಮಾನ ಪ್ರಾಧಿಕಾರವು ಆದಾಯ ಗಳಿಕೆ ಉದ್ದೇಶದಿಂದ ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಈ ಮೊದಲು ಹೀಗೆ ಗುತ್ತಿಗೆ ಪಡೆದುಕೊಂಡವರು ಆ ವಿಮಾನ ನಿಲ್ದಾಣದಿಂದ ಗಳಿಸುವ ಆದಾಯದ ಒಂದು ಭಾಗವನ್ನು ಪ್ರಾಧಿಕಾರಕ್ಕೆ ಅರ್ಥಾತ್ ಸರ್ಕಾರಕ್ಕೆ ಕೊಡಬೇಕಾಗಿತ್ತು. ಆದರೆ ಈ ಬಾರಿ ಪ್ರತಿ ಪ್ರಯಾಣಿಕನಿಗೆ ಒಂದು ನಿರ್ದಿಷ್ಟ ಆದಾಯವನ್ನು ನೀಡಬೇಕಾದ ಹೊಸ ಷರತ್ತಿನೊಂದಿಗೆ ಹರಾಜು ಪ್ರಕ್ರಿಯೆ ನಡೆಯಿತು. ಇದರಲ್ಲಿ ಅದಾನಿ ಸಮೂಹ ದೊಡ್ಡಮಟ್ಟದ ಗುತ್ತಿಗೆಗಳನ್ನು ಗೆದ್ದುಕೊಂಡಿತು.
ಇಲ್ಲೆಲ್ಲ ಸ್ಥಳೀಯರ ಅಪೇಕ್ಷೆ ಏನೆಂದರೆ, ಅದಾನಿ ಸಮೂಹವು ವಿಮಾನ ನಿಲ್ದಾಣಗಳಲ್ಲಿ ಅದಕ್ಕೆ ಸೇರಿದ ವ್ಯವಹಾರಗಳನ್ನು ಮಾಡಿಕೊಳ್ಳಲಿ, ಆದರೆ ನಾಮಫಲಕಗಳಲ್ಲಿ ಅದಕ್ಕೆ ಜಾಗ ಕೊಡಬೇಕಿಲ್ಲ ಎಂಬುದು. ಯಾವುದೇ ವಿಮಾನ ನಿಲ್ದಾಣ ಅದಾನಿ ಏರ್ಪೋರ್ಟ್ ಎಂದು ಕರೆಸಿಕೊಳ್ಳುವುದರಿಂದ ಅದು ಸಂಪೂರ್ಣ ಖಾಸಗಿ ಸ್ವತ್ತೆಂಬಂತೆ ಆಗುತ್ತದೆ ಎಂಬ ಆಕ್ಷೇಪಗಳು ಬಂದಿದ್ದವು.