Wednesday, August 10, 2022

Latest Posts

ಆದಿ ಶಕ್ತಿ ಮಹದೇವಮ್ಮ ದೇವಾಲಯ ಧ್ವಂಸ: ಡಿಸಿ, ತಹಸೀಲ್ದಾರ್ ತಲೆದಂಡಕ್ಕೆ ಹಿಂದು ಜಾಗರಣ ವೇದಿಕೆ  ಪಟ್ಟು

ದಿಗಂತ ವರದಿ ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿ ಶಕ್ತಿ ಮಹದೇವಮ್ಮ ದೇವಾಲಯ ಧ್ವಂಸಗೊಳಿಸಿದ ಮೈಸೂರಿನ ಡಿಸಿ, ನಂಜನಗೂಡಿನ ತಹಸೀಲ್ದಾರ್ ತಲೆದಂಡಕ್ಕೆ ಹಿಂದು ಜಾಗರಣ ವೇದಿಕೆ ಬಿಗಿ ಪಟ್ಟು ಹಿಡಿದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದೆ. ಸರ್ಕಾರ ಈ ಅವಧಿಯನ್ನು ಕ್ರಮ ಜರುಗಿಸದಿದ್ದರೆ ಸೆ.27ರಿಂದ ಮೈಸೂರಿನಿಂದ ಪಾದಯಾತ್ರೆ ಆರಂಭಿಸಿ, ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೇ ರಾಜ್ಯದಲ್ಲಿರುವ ಹಿಂದು ದೇವಸ್ಥಾನಗಳನ್ನು ಸುಪ್ರೀಂಕೋರ್ಟ್ ಆದೇಶದ ನೆಪದಲ್ಲಿ ಧ್ವಂಸಗೊಳಿಸುವುದನ್ನು ನಿಲ್ಲಿಸಿ, ಕೂಡಲೇ ದೇವಾಲಯಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಧ್ವಂಸಗೊಳಿಸಲಾಗಿರುವ ಜಾಗದಲ್ಲಿ ಆದಿ ಶಕ್ತಿ ಮಹದೇವಮ್ಮ ದೇವಸ್ಥಾನವನ್ನು ಸರ್ಕಾರದಿಂದಲೇ ಪುನರ್ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದು, ಇದನ್ನು ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.
ಗುರುವಾರ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಹಿಂದು ಜಾಗರಣ ವೇದಿಕೆಯ ಮೈಸೂರು ಘಟಕದಿಂದ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿ ಶಕ್ತಿ ಮಹದೇವಮ್ಮ ದೇವಾಲಯ ಧ್ವಂಸಗೊಳಿಸಿದ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅವರು ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಅವರು, ದೇವಸ್ಥಾನಗಳ ತೆರವಿನ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ದೇವಸ್ಥಾನಗಳ ನಿರ್ಮಾಣ ಕಾನೂನು ಬದ್ಧವಾಗಿದ್ದರೆ, ನ್ಯಾಯವಾಗಿದ್ದರೆ, 2008ಕ್ಕಿಂತ ಹಿಂದೆ ನಿರ್ಮಾಣ ಮಾಡಿದ್ದರೆ, ಅಂತಹ ದೇವಸ್ಥಾನಗಳನ್ನು ಸಕ್ರಮಗೊಳಿಸಿ, ಒಂದು ವೇಳೆ ಯಾವುದೇ ದೇವಸ್ಥಾನ ಸಕ್ರಮವಲ್ಲದಿದ್ದರೆ, ಜನರ ಭಾವನೆಗೆ ಮನ್ನಣೆ ನೀಡಿ, ಸ್ಥಳಾಂತರ ಮಾಡಿ, ಯಾವುದೂ ಸಾಧ್ಯವಾಗದಿದ್ದರೆ ಅಂತಿಮ ಆಯ್ಕೆಯಾಗಿ ದೇವಾಲಯಗಳನ್ನು ತೆರವುಗೊಳಿಸಿ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದರೆ ಇದನ್ನು ಸರಿಯಾಗಿ ಓದಿ, ಅರ್ಥ ಮಾಡಿಕೊಳ್ಳಲಷ್ಟು ಕನಿಷ್ಠ ಜ್ಞಾನವೂ ಇಲ್ಲದ ಸರ್ಕಾರದ ಮುಖ್ಯಕಾರ್ಯದರ್ಶಿಗಳು ರಾಜ್ಯದಲ್ಲಿರುವ ಹಿಂದು ದೇವಾಲಯಗಳನ್ನು ಒಡೆದು ಹಾಕಿರುವ ಬಗ್ಗೆ ಪ್ರತಿನಿತ್ಯವೂ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಅದರ ಪಾಲನೆಗೆಂದು ಮೈಸೂರಿನ ಡಿ.ಸಿ, ನಂಜನಗೂಡಿನ ತಹಸೀಲ್ದಾರ್ ಮೋಹನ್ ಕುಮಾರಿ, ಏಕಾಏಕಿಯಾಗಿ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿ ಶಕ್ತಿ ಮಹದೇವಮ್ಮ ದೇವಾಲಯ ಧ್ವಂಸಗೊಳಿಸಿದ್ದಾರೆ. ತಡೆಯಲು ಬಂದ ಗ್ರಾಮದ ಜನರಿಗೆ ಕೇಸ್‌ಗಳನ್ನು ಹಾಕುವ ಬೆದರಿಕೆಯೊಡ್ಡಿದ್ದಾರೆ. ಕನಿಷ್ಠ ಪಕ್ಷ ದೇವಾಲಯ ತೆರವುಗೊಳಿಸುವ ಬಗ್ಗೆ ಗ್ರಾಮದ ಮುಖಂಡರಿಗೆ, ದೇವಾಲಯದ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿಲ್ಲ, ದೇವಸ್ಥಾನವನ್ನು ಸ್ಥಳಾಂತರ ಮಾಡಿಕೊಳ್ಳುತ್ತೇವೆ ಎಂದು ಹೇಳಿದ ಗ್ರಾಮಸ್ಥರಿಗೆ ಅವಕಾಶವನ್ನೂ ನೀಡಿಲ್ಲ. ದೌರ್ಜನ್ಯ ಎಸಗಿ, ದಬ್ಬಾಳಿಕೆ ನಡೆಸಿದ್ದಾರೆ. ಅಧಿಕಾರಿಗಳ ಈ ದುಂಡಾವರ್ತನೆವನ್ನು ಸಹಿಸಲು ಸಾಧ್ಯವಿಲ್ಲ. ಇದೇ ಕೊನೆಯಾಗಬೇಕು. ಭಾರತ ಈಗ ಬ್ರೀಟಿಷರ ಕಾಲದಲ್ಲಿ ಇಲ್ಲ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದೆ ಎಂದು ಸರ್ಕಾರ, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು, ಹಿಂದುಗಳ ನಂಬಿಕೆ, ಭಾವನೆಗಳ ಮೇಲೆ ಎಸಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಗೆ ಬಗ್ಗುವುದಿಲ್ಲ, ಮಾಡುತ್ತಿರುವ ಅಪಮಾನ, ಅನ್ಯಾಯವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಗುಡುಗಿದರು.
ಕೂಡಲೇ ಕ್ಷಮೆಯಾಚಿಸಬೇಕು: ಹಿಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದಕ್ಕೆ ಡಿಸಿ, ನಂಜನಗೂಡಿನ ತಹಸೀಲ್ದಾರ್ ಕೂಡಲೇ ಕ್ಷಮೆಯಾಚಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು, ಮುಖ್ಯಮಂತ್ರಿಗಳು ಧ್ವಂಸಗೊಳಿಸಿರುವ ದೇವಸ್ಥಾನವನ್ನು ಪುನರ್ ನಿರ್ಮಿಸುವುದಾಗಿ ಘೋಷಿಸಬೇಕು, ದೇವಾಲಯ ಧ್ವಂಸಗೊಳಿಸಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ, ಅವರ ತಲೆ ದಂಡ ಮಾಡಬೇಕು, ರಾಜ್ಯದಲ್ಲಿರುವ ದೇವಾಲಯಗಳ ತೆರವು ಕಾರ್ಯಚರಣೆಯನ್ನು ಕೈಬಿಡಬೇಕು. ಈ ಮೂರು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಮುಂದೆ ಇಡುತ್ತಿದ್ದೇವೆ. ಇನ್ನು 10 ದಿನದೊಳಗೆ ಮುಖ್ಯಮಂತ್ರಿಗಳ ಬೇಡಿಕೆಗಳನ್ನು ಈಡೇರಿಸಬೇಕು, ನಿರ್ಲಕ್ಷö್ಯ ಮಾಡಿದರೆ, ನಿಮ್ಮ ತಲೆದಂಡವನ್ನೇ ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆಗೆ ಆಗಮಿಸಿದ ಮೈಸೂರು ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಗೆ ಮನವಿ ಸಲ್ಲಿಸಿದರು.
ಈ ವೇಳೆ ವೇದಿಕೆಯ ವಿಭಾಗೀಯ ಅಧ್ಯಕ್ಷ ಲೋಹಿತ್ ಅರಸ್,ಪ್ರಾಂತ್ಯ ಉಪಾಧ್ಯಕ್ಷ ಲಾಲ್ ಅಯ್ಯನ್, ಹಿರಿಯ ವಕೀಲರಾದ ಕೇಶವಮೂರ್ತಿ, ಹುಚ್ಚಗಣಿ ಗ್ರಾಮದ ಆದಿ ಶಕ್ತಿ ಮಹದೇವಮ್ಮ ದೇವಾಲಯದ ಆಡಳಿತ ಮಂಡಳಿ ಸದಸ್ಯ ನರಸಿಂಹಗೌಡ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಶಾಸಕ ಎಸ್.ಎ.ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss