ದಿಗಂತ ವರದಿ ಮಂಡ್ಯ :
ಪರಿಸರವನ್ನು ಉಳಿಸುವ ಸಲುವಾಗಿ ಗಿಡ-ಮರಗಳನ್ನು ನೆಟ್ಟು ಬೆಳೆಸುವ ಉದ್ದೇಶದಿಂದ ಹತ್ತು ಪಂಚಾಯಿತಿಗಳನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ನಗರದ ಮೈಷುಗರ್ ಕಾರ್ಖಾನೆ ಪಕ್ಕದಲ್ಲಿರುವ ಗಜೇಂದ್ರ ಮೋಕ್ಷ ಕೊಳ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ಒತ್ತಾಸೆಯಾಗಿ ನಿಲ್ಲಲು ಮುಂದಾಗಿದ್ದೇನೆ. ಇದಕ್ಕೆ ವಿವಿಧ ಸಂಘಟನೆಗಳು ಕೈಜೋಡಿಸಿರುವುದಾಗಿ ಹೇಳಿದರು.
ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದಕ್ಕೆ ಪ್ರಾಮುಖ್ಯತೆ ನೀಡಬೇಕು. ನಗರಸಭೆಯ ಎಲ್ಲಾ ಸದಸ್ಯರು ವಾರ್ಡ್ಗಳಲ್ಲಿ ಶುಚಿತ್ವ ಕಾಪಾಡಿಕೊಂಡಾಗ ಸ್ವಚ್ಛ ಮಂಡ್ಯ ಎಂಬ ಕೀರ್ತಿಗೆ ಪಾತ್ರವಾಗಲು ಸಾಧ್ಯವಾಗುತ್ತದೆ. ಅನೇಕ ವಾರ್ಡ್ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಕಸದ ತೊಟ್ಟಿಯಲ್ಲಿ ಬಿದ್ದಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಆಯುಷ್ ಆಸ್ಪತ್ರೆ ಪಕ್ಕದಲ್ಲೇ ಕಸದ ರಾಶಿ ಬಿದ್ದಿರುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.