ಹೊಸ ದಿಗಂತ ವರದಿ, ಕಲಬುರಗಿ:
ಕಲಬುರಗಿ ಹೊರವಲಯದ ಕೆಸರಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನಿಂದ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದರು.
ಇತ್ತ ಕಲಬುರಗಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನಾಗರಾಜ ಸೇರಿದಂತೆ ಸಿಬ್ಬಂದಿ ವರ್ಗವು ಸಾಂಕೇತಿಕವಾಗಿ ಪೂಜೆ ನೆರವೇರಿಸಿ ಕಚೇರಿ ಪ್ರವೇಶಿಸಿದರು.
3.5 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ 7.05 ಕೋಟಿ ರೂ. ವೆಚ್ಚದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು 1.50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ತರಬೇತಿ ಕೇಂದ್ರ ಒಂದೇ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ಗ್ರಂಥಾಲಯ, ಆಡಳಿತಾತ್ಮಕ ಕೋಣೆ, 5 ಸಾಮಾನ್ಯ ಕೋಣೆ, ಅಡುಗೆ ಕೋಣೆ, ಶೌಚಾಲಯಗಳಿವೆ. ಮೊದಲನೇ ಮಹಡಿಯಲ್ಲಿ 2 ತರಬೇತಿ ಹಾಲ್, 2 ಅತಿಥಿಗೃಹ ಕೋಣೆ, 12 ಸಾಮಾನ್ಯ ಕೋಣೆ ಮತ್ತು ಸಾಮಾನ್ಯ ಶೌಚಾಲಯಗಳಿವೆ. ಎರಡನೇ ಮಹಡಿಯಲಿ 100 ಜನ ಸಾಮಥ್ರ್ಯದ 2 ಡಾರ್ಮಿಟರಿ, 12 ಸಾಮಾನ್ಯ ಕೋಣೆ, ಕಂಪ್ಯೂಟರ್ ಲ್ಯಾಬ್, ತರಬೇತಿ ಕೋಣೆ ಇವೆ. ಒಟ್ಟಾರೆ 43525 ಚದುರ ಅಡಿ ಅಳತೆಯಲ್ಲಿ ಈ ಕಟ್ಟಡ ತಲೆ ಎತ್ತಿದೆ ಎಂದು ನಿರ್ಮಾಣ ಉಸ್ತುವಾರಿ ವಹಿಸಿದ್ದ ಕೆ.ಆರ್.ಐ.ಡಿ.ಎಲ್ ಪ್ರಭಾರಿ ಅಧೀಕ್ಷಕ ಅಭಿಯಂತರರಾಗಿರುವ ಕಾರ್ಯನಿರ್ವಾಹಕ ಅಭಿಯಂತ ಶೇಖ್ ಸಲಿಮುದ್ದಿನ್ ತಿಳಿಸಿದರು.
ಮೈಸೂರಿಗೆ ಹೊಗೋದು ತಪ್ಪಿತು
ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ. ಸಂಸ್ಥೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕಾಲ-ಕಾಲಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಸತಿ ಸಹಿತ ತರಬೇತಿ ನೀಡಲು ಈ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ಹಿಂದೆಲ್ಲ ತರಬೇತಿ ಪಡೆಯಲು ಈ ಭಾಗದ ಪ್ರತಿನಿಧಿಗಳು ಮೈಸೂರಿಗೆ ಹೋಗಬೇಕಾಗಿತ್ತು. ಈಗ ಕಲಬುರಗಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ತೆರೆದಿರುವುದರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಇಲ್ಲಿಯೆ ತರಬೇತಿ ಪಡೆಯಬಹುದಾಗಿದೆ.
ಇದೇ ರೀತಿ ಧಾರವಾಡದಲ್ಲಿಯೂ ಪ್ರಾದೇಶಿಕ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣದ ಹಂತದಲ್ಲಿದೆ ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನಾಗರಾಜ ಈ ಸಂದರ್ಬದಲ್ಲಿ ತಿಳಿಸಿದರು.
ಈ ಸಂದರ್ಭ ಎಸ್.ಐ.ಆರ್.ಡಿ. ಸಂಸ್ಥೆಯ ಕಲಬುರಗಿ ಡಿ.ಟಿ.ಸಿ. ಸುಲೋಚನಾ ಎಸ್. ಅಕ್ಕಾ, ಕೆ.ಆರ್.ಐ.ಡಿ.ಎಲ್. ಕಲಬುರಗಿ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜಾಫರ ಅಹ್ಮದ್ ಸೇರಿದಂತೆ ಮತ್ತಿತರು ಇದ್ದರು.