ಜೊತೆಯಲ್ಲಿ ಪುರುಷರಿಲ್ಲದಿದ್ದರೆ ತಾಲಿಬಾನಿನಲ್ಲಿ ಮಹಿಳೆಯರು ವಿಮಾನ ಹತ್ತುವಂತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈಚೆಗೆ ತಾಲಿಬಾನ್ ಕಮಾಂಡರ್‌ಗಳು ಅನೇಕ ಮಹಿಳೆಯರಿಗೆ ವಿಮಾನಗಳನ್ನು ಏರಲು ನಿರಾಕರಿಸಿದ ಘಟನೆ ವರದಿಯಾಗಿದೆ. ಹೆಣ್ಣು ಮಕ್ಕಳಿಗೆ ತಮ್ಮ ಪೋಷಕರು, ಪತಿ ಜೊತೆಗಿಲ್ಲದೇ ಬೇರೆ ಸ್ಥಳಗಳಿಗೆ ಹೋಗುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ.
ವರದಿಗಳ ಪ್ರಕಾರ, ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹತ್ತಾರು ಮಹಿಳೆಯರು ಆಘಾತಕ್ಕೆ ಒಳಗಾದರು. ಅವರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ಏರಲು ಸಾಧ್ಯವಾಗಿಲ್ಲ. ಈ ಕುರಿತು ಮಾಹಿತಿ ನೀಡಿದ ಅಫ್ಘಾನ್ ಏರ್‌ಲೈನ್ಸ್ ಅಧಿಕಾರಿಗಳು ಪುರುಷ ರಕ್ಷಕರಿಲ್ಲದೆ ಮಹಿಳೆಯರು ವಿಮಾನ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಲಾಯಿತು ಎಂದಿದ್ದಾರೆ.
ತಾಲಿಬಾನ್ ಅಧಿಕಾರಿಗಳ ಆದೇಶದ ಕಾರಣದಿಂದಾಗಿ ಇಸ್ಲಾಮಾಬಾದ್, ದುಬೈ ಮತ್ತು ಟರ್ಕಿಗೆ ಕಾಮ್ ಏರ್ ಮತ್ತು ಸರಕಾರಿ ಸ್ವಾಮ್ಯದ ಅರಿಯಾನಾ ಏರ್‌ಲೈನ್ ವಿಮಾನಗಳನ್ನು ಏರಲು ಮಹಿಳೆಯರಿಗೆ ನಿರಾಕರಿಸಲಾಯಿತು. ಕೆನಡಾದಿಂದ ಬಂದವರು ಸೇರಿದಂತೆ ಹಲವಾರು ಮಹಿಳೆಯರು ವಿದೇಶದಲ್ಲಿರುವ ತಮ್ಮ ಮನೆಗಳಿಗೆ ಮರಳುವವರಾಗಿದ್ದರು. ತಾಲಿಬಾನ್ ನಾಯಕತ್ವದಿಂದ ಆದೇಶ ಬಂದಿದೆ. ಶನಿವಾರದ ವೇಳೆಗೆ ಪಶ್ಚಿಮ ಹೆರಾತ್ ಪ್ರಾಂತ್ಯಕ್ಕೆ ಅರಿಯಾನಾ ಏರ್‌ಲೈನ್ಸ್ ವಿಮಾನವನ್ನು ಹತ್ತಲು ಹಲವಾರು ಮಹಿಳೆಯರಿಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಕ್ಲಿಯರೆನ್ಸ್ ಒದಗಿಸುವ ಹೊತ್ತಿಗೆ ವಿದೇಶಿಗರು ತಮ್ಮ ವಿಮಾನ ತಪ್ಪಿಸಿಕೊಂಡಿದ್ದಾರೆ.
ತಾಲಿಬಾನ್ ಬಾಲಕಿಯರ ಮಾಧ್ಯಮಿಕ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ.

ತಾಲಿಬಾನ್ ಅಡಿಯಲ್ಲಿ ಮಹಿಳೆಯರ ಸಂಕಟ:
ಆಗಸ್ಟ್ 2021ರಲ್ಲಿ ತಾಲಿಬಾನ್ ದೇಶದಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಅಫ್ಘಾನ್ ಮಹಿಳೆಯರು ಇಸ್ಲಾಮಿಕ್ ಸರಕಾರದ ಕೈಯಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ. ತಾಲಿಬಾನ್ ಮಹಿಳೆಯರ ವಿರುದ್ಧ ತಾರತಮ್ಯ ಮುಂದುವರೆಸಿದೆ. ದೇಶದಲ್ಲಿ ಪುರುಷರು ಅನುಭವಿಸುವ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ನೀಡುತ್ತಿಲ್ಲ. ತಾಲಿಬಾನಿಗಳು ಈಗ ದೇಶದಲ್ಲಿ ಮಹಿಳೆಯರಿಗೆ ಏನಾಗುತ್ತಿದೆಯೋ ಅದು ಅವರ ವೈಯಕ್ತಿಕ ಸಮಸ್ಯೆ ಎಂದು ನಂಬುವ ಮೂಲಕ ಅದನ್ನೇ ಪ್ರಚಾರ ಮಾಡುತ್ತಾರೆ. ಮಹಿಳೆಯರಿಗೆ ಯಾವುದೇ ತೊಂದರೆ ಅಥವಾ ಅನ್ಯಾಯವಾಗುತ್ತಿಲ್ಲ ಎಂದು ಭಾವಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ‘ರಕ್ಷಿಸಲು’ ಸಮರ್ಪಿತವಾದ ಪ್ರಗತಿಪರ ಸಂಘಟನೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಆದಾಗ್ಯೂ, ಪ್ರಪಂಚದಾದ್ಯಂತದ ವಿಶ್ಲೇಷಕರು ಮತ್ತು ವೀಕ್ಷಕರು ಮಹಿಳೆಯರನ್ನು ನಡೆಸಿಕೊಳ್ಳುವುದಕ್ಕಾಗಿ ಅವರನ್ನು ಪದೇ ಪದೇ ಟೀಕಿಸಿದ್ದಾರೆ. ತಾಲಿಬಾನ್‌ನ ಹೊಸ ತಂತ್ರವು ದೇಶದ ಕುಂಟುತ್ತಿರುವ ಆರ್ಥಿಕತೆಯನ್ನು ಹೆಚ್ಚಿಸಲು ಪಾಶ್ಚಿಮಾತ್ಯ ನಿಧಿ ಸಂಗ್ರಹಿಸುವುದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!