ಹೊಸ ದಿಗಂತ ವರದಿ,ಮಂಗಳೂರು:
ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಭೀತಿ ಹುಟ್ಟಿಸಿದ್ದು,ಮೂರನೇ ಅಲೆಯ ಆತಂಕ ಎದುರಾಗಿದೆ. ಕೊರೋನಾ ಹೊಸ ರೂಪಾಂತರಿ ವೈರಸ್ ಹರಡುವ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗಿದೆ.
ಕೇರಳದಲ್ಲಿ ಆತಂಕದ ವಾತಾವರಣವಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಲರ್ಟ್ ಆಗಿರುವಂತೆ ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಗೆ ಕೋವಿಡ್ ಭೀತಿ ಎದುರಾಗದಂತೆ ತಡೆಯುವಲ್ಲಿ ಮೂರನೇ ಅಲೆ ನಿಯಂತ್ರಿಸಲು ಕೇರಳ ಗಡಿಯಲ್ಲಿ ದಿನ 24 ಗಂಟೆಯೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ.
ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವೀಡಿಯೊ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿಗಳು ಕೇರಳದಿಂದ ದ.ಕ.ಕ್ಕೆ ಆಗಮಿಸುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ಕೇರಳ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ಮಾಡಿ 3 ಪಾಳಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಕೇರಳದಿಂದ ಬರುವವರೆಲ್ಲರೂ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು, ಲಸಿಕೆ ಪಡೆದಿರುವುದನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ