ಹೊಸದಿಗಂತ ವರದಿ, ದಾವಣಗೆರೆ:
ಪೋಕ್ಸೋ ಪ್ರಕರಣದಡಿ ಕಳೆದ 14 ತಿಂಗಳಿನಿಂದಲೂ ಜೈಲಿನಲ್ಲಿದ್ದ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಜಾಮೀನು ಮಂಜೂರಾದ ಬೆನ್ನಲ್ಲೇ ಗುರುವಾರ ನೇರವಾಗಿ ದಾವಣಗೆರೆಗೆ ಆಗಮಿಸಿದ್ದಾರೆ.
ನಗರದ ಶಿವಯೋಗ ಮಂದಿರಕ್ಕೆ ಆಗಮಿಸಿದ ಮುರುಘಾ ಶರಣರಿಗೆ ಭಕ್ತಾದಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮದಿಂದ ಬರ ಮಾಡಿಕೊಂಡರು. ನಂತರ ಶಿವಯೋಗಾಶ್ರಮ ಆವರಣದಲ್ಲಿರುವ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರು ಹಾಗೂ ಲಿಂಗೈಕ್ಯ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಕರ್ತೃ ಗದ್ದುಗೆಗೆ ನಮಿಸಿದ ಮುರುಘಾ ಶರಣರು, ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನಕ್ಕೆ ಶರಣರಾದರಲ್ಲದೆ, ಕೆಲ ಹೊತ್ತಿನಲ್ಲೇ ದೊಡ್ಡಪೇಟೆಯ ವಿರಕ್ತ ಮಠಕ್ಕೆ ವಾಸ್ತವ್ಯ ಮಾಡಲು ತೆರಳಿದರು.
ಮುರುಘಾ ಶರಣರು ಬರುತ್ತಿದ್ದಂತೆ ಭಕ್ತಾದಿಗಳು ಜಯಘೋಷ ಕೂಗುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು. ಅನೇಕ ಭಕ್ತಾದಿಗಳು ಮುರುಘಾ ಶರಣರ ಕಾಲಿಗೆ ಬಿದ್ದು, ಆಶೀರ್ವಾದವನ್ನೂ ಪಡೆದರು. ಯಾರೊಂದಿಗೂ ಶರಣರು ಹೆಚ್ಚು ಮಾತನಾಡದೇ, ಮೌನವಾಗಿದ್ದುದು ದಾವಣಗೆರೆಯಲ್ಲಿ ಇದೇ ಮೊದಲು ಎಂಬುದಾಗಿ ಭಕ್ತರು ತಮ್ಮ ಸಂಕಟ ತೋಡಿಕೊಂಡರು.
ಇದೇ ವೇಳೆ ಹರಿಹರ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ ಮಾತನಾಡಿ, ಗುರುಗಳು ಬೆಂಗಳೂರು ಅಥವಾ ಬೇರೆಡೆ ಹೋಗಬಹುದೆಂದು ಭಾವಿಸಿದ್ದೆವು. ದಾವಣಗೆರೆಯಲ್ಲಿ ವಾಸ್ತವ್ಯ ಮಾಡುತ್ತಿರುವುದು ಖುಷಿ ತಂದಿದೆ. ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಹೆಸರು ಪಡೆದ ಜಿಲ್ಲೆಯಲ್ಲಿ ಶರಣರು ತಂಗುತ್ತಿರುವುದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುರುಘಾ ಶರಣರು, ಹೌದು, ದಾವಣಗೆರೆ ಸಾಂಸ್ಕೃತಿಕ ನಗರಿ. ಇಲ್ಲಿಯೇ ನಾವು ವಾಸ್ತವ್ಯ ಹೂಡುತ್ತಿದ್ದೇವೆ ಎಂದಷ್ಟೇ ನುಡಿದರು.
ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀಮಠದ ಭಕ್ತರಾದ ಎಸ್.ಓಂಕಾರಪ್ಪ, ಎಂ.ಜಯಕುಮಾರ, ಕುಂಟೋಜಿ ಚನ್ನಪ್ಪ, ಪಾಲಾಕ್ಷಪ್ಪ, ಯಾದವ ಸಮಾಜದ ಬಾಡದ ಆನಂದರಾಜ, ಡಾ.ನಸೀರ್ ಅಹಮ್ಮದ್, ಡಾ.ಜಿ.ಸಿ.ಬಸವರಾಜ, ವಕೀಲರಾದ ಸಂದೀಪ್ ಪಾಟೀಲ್, ಉಮೇಶ ಇತರರು ಹಾಜರಿದ್ದರು.