ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಜ್ಜಿ ಮಾಡಿದ ಉಪ್ಪಿನ ಕಾಯಿ ಚಪ್ಪರಿಸಿದ ಮೊಮ್ಮಗ ‘ಗುಜ್ಜಿ ಬೆನ್ನಾ ನಾ ನಾಸ್ತಾ’ ಖಾದ್ಯದ ಅಂಗಡಿಯನ್ನೇ ತೆರೆದ!

ಒಂದೇ ದೀಪದ ಧಗಧದಕ್ಕೆ ರೆಕ್ಕೆ ತಗುಲಿ ಸುಟ್ಟ ಪತಂಗದಂತಾಗಿತ್ತು ಬದುಕು. ಸುಟ್ಟ ರೆಕ್ಕೆಗಳೊಂದಿಗೆ ಹಾರಲೇ ಬೇಕಾದ ಅನಿವಾರ್ಯತೆ. ನೂರು ವೇದನೆಗಳ ನಡುವೆಯೂ ಒಂದು ಸಾಧನೆಯಾಗಲೇಬೇಕೆಂಬ ಹಠ. ಮುಷ್ಠಿ ಬಿಚ್ಚಿದರೆ ಸುಕ್ಕುಗಟ್ಟಿದ ಚರ್ಮ, ಖಾಲಿ ಕೈ ಹೊರತು ಮತ್ತೇನಿಲ್ಲ. ಇವೆಲ್ಲದರ ನಡುವೆಯೂ ಅಚಲವಾಗಿ ನಿಂತಿದ್ದು ಬದುಕಲೇಬೇಕೆಂಬ ಛಲ. ಇಷ್ಟೆಲ್ಲ ಯಾಕೆ ಹೇಳ್ತಿದ್ದೀನಿ ಗೊತ್ತಾ? ಇಲ್ಲೊಬ್ಬ ಮಾಗಿದ ವಯಸ್ಸಿನ ಮಹಿಳೆ ಕಷ್ಟಗಳ ಹೊಳೆ ಹರಿದರೂ ಧೃತಿಗೆಡದೆ ಬದುಕಿನ ತುಂಬಾ ಭರ್ತಿ ಉಲ್ಲಾಸ ತುಂಬಿಕೊಂಡು ಬದುಕುತ್ತಿದ್ದಾರೆ. ಚಿಕ್ಕ-ಪುಟ್ಟ ಸಮಸ್ಯೆಗಳಿಗೂ ಹೆದರಿ ಮೂಲೆ ಸೇರುವವರೂ ಈ ಸ್ಟೋರಿ ಓದಲೇ ಬೇಕು.

ಈಕೆಯ ಹೆಸರು ಊರ್ಮಿಳಾ ಜಮ್ನಾದಾಸ್ ಆಶರ್. ಇವರು ಮುಂಬೈ ಮೂಲದವರು. ಇವರಿಗೆ 77ರ ಪ್ರಾಯ. ಇವರ ದಿನ ಪ್ರಾರಂಭವಾಗುವು ಬೆಳಗ್ಗೆ 5.30ಕ್ಕೆ. ಮನೆಗೆಲಸ ಮುಗಿಸಿ, ಮೊಮ್ಮಗ ಹರ್ಷ ಮತ್ತು ಸೊಸೆ ರಾಜಶ್ರೀಗೆ ಟೀ, ತಿಂಡಿ ಮಾಡಿಕೊಟ್ಟು ನಂತರ ತಾವು ತಿಂಡಿ ತಿನ್ನುತ್ತಾ ದಿನಪತ್ರಿಕೆ ಓದಿಮುಗಿಸುವಲ್ಲಿ ಮೂರು ತಾಸು ಮುಗಿದಿರುತ್ತದೆ. ಇದಾದ ನಂತರ ಪ್ರತಿ ದಿನದ ಸಾಹಸ ಪ್ರಾರಂಭವಾಗುತ್ತದೆ.

ತಮ್ಮ “ಗುಜ್ಜಿ ಬೆನ್ನಾ ನಾ ನಾಸ್ತಾ” ಹೋಮ್ ಮೇಡ್ ಖಾದ್ಯದ ಅಂಗಡಿಗೆ ಬೇಕಾಗುವಂತ ತಿನಿಸು ಹಾಗೂ ಮುಂಬೈ ನಗರದಾದ್ಯಂತ ಪ್ರತಿ ದಿನ ಬರುವ ಖಾದ್ಯಗಳ ಆರ್ಡರ್‌ಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಅಂದಹಾಗೆ ಇವರು ಪ್ರತಿ ದಿನ ತಯಾರಿಸುವುದು ಒಂದೆರಡು ಖಾದ್ಯವಲ್ಲ. ಧೋಕ್ಲಾ, ಪುರಾನ್ ಪೋಲಿ, ಹಲ್ವಾ, ಸಬುದಾನಾ ಖಿಚ್ಡಿ ಸೇರಿದಂತೆ 35 ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಸೊಸೆ ರಾಜಶ್ರೀ ಸೇರಿದಂತೆ ಮತ್ತಿಬ್ಬರು ಸಹಾಯಕರೊಂದಿಗೆ ತಿಂಡಿಗಳನ್ನು ಆರ್ಡರ್ ಬಂದಿರುವ ವಿಳಾಸಕ್ಕೆ ತಲುಪಿಸುತ್ತಾರೆ.

After Grandson’s Debilitating Accident, Gritty 77-YO Helps Him Start Snack Business

ಈ ಮಾಗಿದ ವಯಸ್ಸಿನಲ್ಲಿ ಇಷ್ಟೆಲ್ಲ ಯಾಕೆ ಕಷ್ಟಪಡಬೇಕು, ಮನೆಯಲ್ಲಿಯೇ ಹಾಯಾಗಿ ಇರಬಹುದಿತ್ತಲ್ಲ ಅಂಥ ಅನ್ಕೊತಿದ್ರಾ? ಊರ್ಮಿಳಾ ಅವರು ಈ ಇಳಿವಯಸ್ಸಿನಲ್ಲಿ ಇಂತಹ ಸಾಹಸಕ್ಕೆ ಇಳಿಯಲು ಅವರು ಜೀವನದಲ್ಲಿ ಅನುಭವಿಸಿದ ನೋವು, ದುರಂತವೇ ಕಾರಣ.

ಊರ್ಮಿಳಾ ಅವರ ಮಗಳು ಎರಡೂವರೆ ವರ್ಷದವಳಿದ್ದಾಗ ಎತ್ತರದ ಕಟ್ಟಡದಿಂದ ಬಿದ್ದು ತೀರಿಕೊಂಡಳು. ಮಗಳು ಸತ್ತ ಕೆಲವು ವರ್ಷಗಳ ನಂತರ ಇಬ್ಬರೂ ಗಂಡು ಮಕ್ಕಳೂ ತೀರಿಕೊಂಡರು. ಬಬ್ಬ ಮೆದುಳಿನಲ್ಲಿ ಗಡ್ಡೆಯಾಗಿದ್ದರಿಂದ, ಇನ್ನೊಬ್ಬ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈಗ ಊರ್ಮಿಳಾ ಅವರ ಪಾಲಿಗೆ ಉಳಿದಿರುವುದು ಮೊಮ್ಮಗ ಹರ್ಷ ಮಾತ್ರ.

ಹರ್ಷ 20212ರಲ್ಲಿ ಎಂಬಿಎ ಪೂರ್ಣಗೊಳಿಸಿ ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒಮನ್ ಸಚಿವಾಲಯದೊಂದಿಗೆ ಕೆಲಸ ಮಾಡಿದರು. 2014ರಲ್ಲಿ ಈ ಕೆಲಸವನ್ನು ತೊರದು ಮತ್ತೊಂದು ಕೆಲಸಕ್ಕೆ ಸೇರಿದರು. ಊರ್ಮಿಳಾ ಕುಟುಂಬ ಸ್ವಲ್ಪ ಸುಧಾರಿಸಿಕೊಂಡಿತ್ತು. ಅಷ್ಟರಲ್ಲಿಯೇ ಮತ್ತೊಂದು ದುರಂತ ಸಂಭವಿಸಿತು. 2019ರಲ್ಲಿ ರಸ್ತೆ ಅಪಘಾತ ಸಂಭವಿಸಿ ಹರ್ಷ ಮೇಲಿನ ತುಟಿಯನ್ನೇ ಕಳೆದುಕೊಂಡರು. ಶಸ್ತ್ರ ಚಿಕಿತ್ಸೆಗೆ ಮಾಡಿಸಿಕೊಂಡರೂ ತುಟಿ ಸರಿಯಾಗಲಿಲ್ಲ. ತನ್ನ ರೂಪ ವಿಕಾರವಾಯಿತೆಂದು ಖಿನ್ನೆತೆಗೆ ಒಳಗಾದರು. ಯಾವಾಗಲೂ ಮಂಕಾಗಿಯೇ ಇರಲು ಪ್ರಾರಂಭಿಸಿದರು. ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿದರು. ಕುಟುಂಬಕ್ಕೆ ಆರ್ಥಿಕವಾಗಿ ಬೆಂಗಾವಲಾಗಿದ್ದ ಕೆಲಸವನ್ನೇ ಬಿಟ್ಟರು. ಮೊಮ್ಮಗನನ್ನು ಮೊದಲಿನಂತೆ ಮಾಡಲು ಊರ್ಮಿಳಾ ಹರಸಾಹಸವನ್ನೇ ಮಾಡಬೇಕಾಯಿತು.

2020ರಲ್ಲಿ ಕೋವಿಡ್ ಬಿಕ್ಕಟ್ಟು ಎದುರಾದಾಗ ಊರ್ಮಿಳಾ ಕುಟುಂಬದ ಆರ್ಥಿಕ ಪರಿಸ್ಥಿತಿ ಪೂರ್ತಿ ನೆಲಕಚ್ಚಿ, ಅಂಬಿಗನಿಲ್ಲದ ದೋಣಿಯಂತಾಯಿತು.

ಊರ್ಮಿಳಾ ಅವರಿಗೆ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಮಾಡಿಕೊಳ್ಳುವುದಕ್ಕಿಂತ ಮೊಮ್ಮಗನನ್ನು ಮೊದಲಿನಂತೆ ಮಾಡುವುದು ಮುಖ್ಯವಾಗಿತ್ತು.  “ನೀನು ಕೇವಲ ನಿನ್ನ ತುಟಿ, ಕೆಲಸವನ್ನು ಕಳೆದುಕೊಂಡಿದ್ದೀಯಾ, ಆದರೆ ನಾನು 9 ತಿಂಗಳು ಹೊತ್ತು, ಹೆತ್ತು ಸಾಕಿದ ಮೂವರು ಮಕ್ಕಳನ್ನು ಕಳೆದುಕೊಂಡಿದ್ದೇನೆ. ನನ್ನ ದುಃಖದ ಮುಂದೆ ನಿನ್ನದೇನೂ ಅಲ್ಲ. ಕಳೆದು ಹೋದದ್ದನ್ನು ನೆನಪಿಸಿಕೊಂಡು ದುಃಖ ಪಡುವುದಕ್ಕಿಂತ, ಇರುವುದರೊಂದಿಗೆ ತೃಪ್ತಿಯಿಂದ ಬದುಕುವುದು ಮುಖ್ಯ ಎಂಬ ಊರ್ಮಿಳಾ ಅವರ ಮಾತು ಹರ್ಷನಿಗೆ ಭರವಸೆಯ ಬೆಳಕಾಯಿತು. ಅಜ್ಜಿ ಹೇಳಿದ ಮಾತುಗಳಲ್ಲಿ ಭವಿಷ್ಯದ ಕಿರಣಗಳು ಪ್ರಜ್ವಲಿಸಿತು.

ಹರ್ಷ ತಡಮಾಡಲಿಲ್ಲ. ಏನಾದರೂ ಸಾಧಿಸಲೇ ಬೇಕು ಎಂಬ ಛಲ ಹೊತ್ತು ಎದ್ದುನಿಂತ. ಅಜ್ಜಿ ಹಾಗೂ ಪತ್ನಿಯ ಸಹಕಾರದೊಂದಿಗೆ ಗುಜ್ಜು ಬೆನ್ ನಾ ನಾಸ್ತಾ ಎಂಬ ಖಾದ್ಯದ ಅಂಗಡಿ ತೆರೆದ. ಇವತ್ತು ಈ ಖಾದ್ಯದ ಅಂಗಡಿ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ 500 ಕೀ.ಮೀ. ದೂರದಿಂದ ಜನರು ಬಂದು ಇಲ್ಲಿಯ ರುಚಿಯಾದ ತಿಂಡಿಗಳನ್ನು ತಿಂದು ಹೋಗುತ್ತಾರಂತೆ.

ಅಜ್ಜಿ ಮಾಡುವ ತಿಂಡಿಗಳಿಗೆ ನನ್ನ ಸ್ನೇಹಿತರು ಕ್ಯೂ ನಿಲ್ತಿದ್ರು… 

“ಒಂದು ದಿನ ಅಜ್ಜಿ ಮನೆಯವರಿಗಾಗಿ ಉಪ್ಪಿನಕಾಯಿ ತಯಾರಿಸುವಾಗ ನನಗೆ ಒಂದು ಆಲೋಚನೆ ಬಂತು. ಇದನ್ನೇ ಅಜ್ಜಿ ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ ಹೇಗೆ ಎಂದು? ಅಜ್ಜಿ ಕೂಡ ಇದಕ್ಕೆ ಸಂತೋಷದಿಂದ ಒಪ್ಪಿಕೊಂಡಳು. ಉಪ್ಪಿನ ಕಾಯಿಯನ್ನು ಮೊದಲು ಪ್ರಚಾರಕ್ಕಾಗಿ ನಮ್ಮ ಸಂಬಂಧಿಗಳಿಗೆ, ಸ್ನೇಹಿತರಿಗೆ ನೀಡುತ್ತಿದ್ದೇವೆ. ನಂತರ ಉಪ್ಪಿನಕಾಯಿಯ ರುಚಿಯ ವರ್ಣನೆ ಬಾಯಿಂದ ಬಾಯಿಗೆ ಹರಡಿ ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತು”.

“ಅಜ್ಜಿ ಮಾಡುವ ತಿಂಡಿಗೆ ನನ್ನ ಸ್ನೇಹಿತರು ಕ್ಯೂ ನಿಲ್ತಿದ್ರು. ಅಜ್ಜಿ ಖಾದ್ಯಗಳನ್ನು ಸಕ್ಕತ್ ಆಗಿ ಮಾಡ್ತಾಳೆ. ಉಪ್ಪಿನ ಕಾಯಿ ಹಿಟ್ ಆಗ್ತಿದ್ದಂತೆ ನಾನಾರೀತಿಯ ತಿಂಡಿಗಳನ್ನು ತಯಾರಿಸಲು ಅಜ್ಜಿ ಪ್ರಾರಂಭಿಸಿದಳು. ಇದೀಗ ಅಜ್ಜಿ ಪ್ರತಿ ದಿನ ಸಮೋಸಾ, ಪಪ್ಸ್, ಹಲ್ವಾ, ಆಲೂ ಪ್ಯಾಟೀಸ್, ಥೇಪ್ಲಾ, ದೋಕ್ಲಾ, ಪುರಾನ್ ಪೋಲಿ ಸೇರಿದಂತೆ 30ಕ್ಕೂ ಹೆಚ್ಚು ಖಾದ್ಯಗಳನ್ನು ತಯಾರಿಸುತ್ತಾಳೆ. ಅಜ್ಜಿ ದಿನಕ್ಕೆ 14 ತಾಸು ಕೆಲಸ ಮಾಡುತ್ತಾಳೆ. ಈ ಇಳಿವಯಸ್ಸಿನಲ್ಲಿಯೂ ಅಜ್ಜಿಯ ಪರಿಶ್ರಮ ನೋಡಿದರೆ ನನಗೆ ಬಹಳ ಹೆಮ್ಮೆಯಾಗುತ್ತದೆ. ಎಂದೆಂದಿಗೂ ಅಜ್ಜಿಯೇ ನನ್ನ ಸ್ಫೂರ್ತಿಯ ಚಿಲುಮೆ” ಎನ್ನುತ್ತಾರೆ ಹರ್ಷ.

“ಇದೀಗ ಪ್ರತಿ ತಿಂಗಳು ಸುಮಾರೂ ಮೂರು ಲಕ್ಷ ರೂಪಾಯಿ ದುಡಿಯುತ್ತಿದ್ದೇವೆ. ಇದರಲ್ಲಿ ಅಂಗಡಿ ಬಾಡಿಗೆ, ಖಾದ್ಯ ತಯಾರಿಸಲು ಬೇಕಾಗುವ ಪದಾರ್ಥಗಳ ಖರೀದಿ, ಮನೆ ಖರ್ಚು ಎಲ್ಲವೂ ಸೇರಿ 90 ಸಾವಿರ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಅಂಗಡಿಯನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಗುರಿ” ಹೊಂದಿರುವುದಾಗಿ ಹರ್ಷ ಹೇಳಿದ್ದಾರೆ.

“ನನಗೆ ಅಡುಗೆ ಮಾಡುವುದು ಬಹಳ ಇಷ್ಟದ ಕೆಲಸ. ಎಷ್ಟು ಲಾಭ ಬರುತ್ತೇ, ಎಷ್ಟು ನಷ್ಟವಾಗುತ್ತೆ ಎಂದು ನಾನು ಲೆಕ್ಕಾಚಾರ ಮಾಡುವುದಿಲ್ಲ. ಗ್ರಾಹಕರಿಗೆ ರುಚಿಯಾದ, ಫ್ರೆಶ್ ತಿಂಡಿಗಳನ್ನು ತಯಾರಿಸುವುದು ಮಾತ್ರ ನನ್ನ ಗುರಿ. ದಿನವೂ 14 ತಾಸು ಕೆಲಸ ಮಾಡಿದರೂ ನನಗೆ ಆಯಾಸವೆನಿಸುವುದಿಲ್ಲ. ಏಕೆಂದರೆ ಹೊಸ-ಹೊಸ ತಿಂಡಿ ತಯಾರಿಸುವುದು ನನಗಿಷ್ಟ”.

“ಮಕ್ಕಳನ್ನು ಕಳೆದುಕೊಂಡಿದ್ದೇನೆಂದು ಅಳುತ್ತ ಕೂರಲು ನನಗಿಷ್ಟವಿಲ್ಲ. ಓಡುತ್ತಿರುವ ಜಗತ್ತಿನೊಂದಿಗೆ ಹೆಜ್ಜೆ ಹಾಕಲೇಬೇಕು. ಹರ್ಷನಿಗೆ ಈಗ ನನ್ನ ಅಗತ್ಯವಿದೆ. ಅವನ ಅಗತ್ಯಗಳಿಗೆ ನಾನು ಆಸರೆಯಾಗುತ್ತೇನೆ” ಎನ್ನುತ್ತಾರೆ ಊರ್ಮಿಳಾ ಜಮ್ನಾದಾಸ್ ಆಶರ್.

ಜೀವನದಲ್ಲಿ ಎದುರಾಗುವ ಕಷ್ಟ, ಸುಖ, ದುಃಖ ವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಅನ್ನುವುದರ ಮೇಲೆಯೇ ನಮ್ಮ ಬದುಕಿನ ಅಂದ-ಚೆಂದಗಳು ನಿರ್ಧಾರವಾಗುತ್ತದೆ. ಊಟ ಮಾಡುವಾಗ ಕಲ್ಲು ಸಿಕ್ಕಿತೆಂದು ಊಟ ಬಿಟ್ಟರೆ ಹೊಟ್ಟೆ ತುಂಬುವುದಿಲ್ಲ. ಕಲ್ಲು ಎತ್ತಿ ಪಕ್ಕಕ್ಕಿಟ್ಟು ಊಟ ಮುಂದುವರೆಸಿದರೆ ಮಾತ್ರ ಹೊಟ್ಟೆ ತುಂಬುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss