ಬಿಸಿಲ ನಡುವೆಯೂ ಕೊಡಗಿನಲ್ಲಿ ಪ್ರವಾಹ ಭೀತಿ

ಹೊಸದಿಗಂತ ವರದಿ ಮಡಿಕೇರಿ: 

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ರಭಸ ಕಡಿಮೆಯಾಗಿದ್ದರೂ, ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಭಾಗಮಂಡಲ-ನಾಪೋಕ್ಲು ರಸ್ತೆಯ ಮೇಲೆ ಕಾವೇರಿ ಹರಿಯುತ್ತಿದ್ದು, ಸೇರಿದಂತೆ ಕಾವೇರಿ ನದಿ ದಂಡೆಯ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ.

ಗುರುವಾರ ರಾತ್ರಿ ವೇಳೆ ಭಾಗಮಂಡಲ ವ್ಯಾಪ್ತಿಯಲ್ಲಿ 200 ಮಿ.ಮೀ.ಗೂ ಅಧಿಕ ಮಳೆ ಬಿದ್ದಿದ್ದು, ಪರಿಣಾಮವಾಗಿ ಬಿಸಿಲಿನ ನಡುವೆಯೂ ಹೊದ್ದೂರು- ನಾಪೋಕ್ಲು, ಸಿದ್ದಾಪುರದ ಕರಡಿಗೋಡು, ಗುಯ್ಯ ರಸ್ತೆಗಳು ಜಲಾವೃತಗೊಂಡಿವೆ. ಕುಶಾಲನಗರ, ಕೊಪ್ಪ ವ್ಯಾಪ್ತಿಯ ತಗ್ಗು ಪ್ರದೇಶದ ನಿವಾಸಿಗಳೂ ಪ್ರವಾಹದ ಆತಂಕ ಎದುರಿಸುತ್ತಿದ್ದಾರೆ. ಈ ನಡುವೆ ಪ್ರವಾಹ ತಪ್ಪಿಸುವ ನಿಟ್ಟಿನಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೂಚನೆ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಇದರಿಂದಾಗಿ ಸಂಭವಿಸಲಿದ್ದ ಭಾರೀ ಹಾನಿ ತಪ್ಪಿದಂತಾಗಿದೆ.

ಕುಶಾಲನಗರ, ಕೊಪ್ಪ ವ್ಯಾಪ್ತಿಯ ಕಾವೇರಿ ನದಿ ತಟದ ತಗ್ಗು ಪ್ರದೇಶದ ನಿವಾಸಿಗಳು ಕಳೆದ 15 ದಿನಗಳಿಂದ ಮನೆ ಖಾಲಿ ಮಾಡಿ ಆತಂಕದಲ್ಲಿ ದಿನದೂಡುತ್ತಿದ್ದಾರೆ.

68 ಕುಟುಂಬಗಳ ಸ್ಥಳಾಂತರ:

ಕಳೆದ 2018-19ರಲ್ಲಿ ಭಾರೀ ಮಳೆಗೆ ಬಿರುಕು ಬಿಟ್ಟು ಆತಂಕ ಸೃಷ್ಟಿಸಿದ್ದ ವೀರಾಜಪೇಟೆಯ ಅಯ್ಯಪ್ಪ (ಮಲೆತಿರಿಕೆ) ಬೆಟ್ಟ ಈ ಬಾರಿ ಮತ್ತೆ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ತಳ ಭಾಗದ ಹಾಗೂ ನೆಹರು ನಗರದ 68 ಕುಟುಂಬಗಳನ್ನು ವೀರಾಜಪೇಟೆ ಸಂತ ಅಣ್ಣಮ್ಮ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ‌ ಅಗತ್ಯ ಆಹಾರ ಕಿಟ್”ಗಳನ್ನು ಪೂರೈಸಲಾಗಿದೆ.
ಶುಕ್ರವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 84.69 ಮಿ.ಮೀ. ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!