ಅಗ್ನಿಪಥವು ಬಹಳ ಹಿಂದಿನಿಂದ ಬಾಕಿಯಿದ್ದ ಪೂರ್ವಯೋಜಿತ ಯೋಜನೆ, ಮಹಿಳಾ ಅಗ್ನಿವೀರರಿಗೂ ಅವಕಾಶ : ರಕ್ಷಣಾ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಗ್ನಿಪಥ ಯೋಜನೆಯು ಬಹಳ ಹಿಂದಿನಿಂದ ಬಾಕಿಯಿದ್ದ ಯೋಜನೆ. ಇದಕ್ಕಾಗಿ ಬಹಳ ಶ್ರಮ ಹಾಕಿ ಚಿಂತನೆ ನಡೆಸಿ ಜಾರಿಗೆ ತರಲಾಗಿದೆ. ತಾರುಣ್ಯ ಮತ್ತು ಅನುಭವವನ್ನು ಸೇನೆಯಲ್ಲಿ ತರುವ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ರಕ್ಷಣಾ ಸಚಿವಾಲಯದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.

ಅಗ್ನಿಪಥ ಯೋಜನೆಯ ಕುರಿತಾಗಿ ಇಂದು ಮದ್ಯಾಹ್ನ ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವಾಲಯದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ “ಈ ಸುಧಾರಣೆಯು ಬಹಳ ಕಾಲದಿಂದ ಬಾಕಿಯಿತ್ತು. ಇಂದು, ಹೆಚ್ಚಿನ ಸಂಖ್ಯೆಯ ಜವಾನರು ತಮ್ಮ 30 ರ ದಶಕದಲ್ಲಿದ್ದಾರೆ ಮತ್ತು ಅಧಿಕಾರಿಗಳು ಹಿಂದಿನದಕ್ಕಿಂತ ಬಹಳ ತಡವಾಗಿ ಆಜ್ಞೆಯನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಈ ಸುಧಾರಣೆಯೊಂದಿಗೆ ನಾವು ತಾರುಣ್ಯ ಮತ್ತು ಅನುಭವವನ್ನು ಸೇನೆಗೆ ತರಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಅಗ್ನಿವೀರರಿಗೆ ನೀಡಲಾಗಿರುವ ಮೀಸಲಾತಿಯನ್ನು ಉಲ್ಲೇಖಿಸಿದ ಅವರು “ಪ್ರತಿ ವರ್ಷ ಸುಮಾರು 17,600 ಜನರು ಮೂರು ಸೇವೆಗಳಿಂದ ಅಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ನಿವೃತ್ತಿಯ ನಂತರ ಅವರು ಏನು ಮಾಡುತ್ತಾರೆ ಎಂದು ಯಾರೂ ಅವರನ್ನು ಕೇಳಲು ಪ್ರಯತ್ನಿಸಿಲ್ಲ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ಸೈನಿಕರಿಗೆ ಅನ್ವಯವಾಗುವ ಸಿಯಾಚಿನ್ ಮತ್ತು ಇತರ ಪ್ರದೇಶಗಳಲ್ಲಿ ಅಗ್ನಿವೀರರೂ ಕೂಡ ತಾರತಮ್ಯವಿಲ್ಲದೇ ಸಮಾನ ಭತ್ಯೆಯನ್ನು ಪಡೆಯುತ್ತಾರೆ. ಸೇವೆಯ ಸಂದರ್ಭದಲ್ಲಿ ಮರಣ ಹೊಂದಿದ ಅಗ್ನಿವೀರರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ” ಎಂದಿದ್ದಾರೆ.

“ಪ್ರಸ್ತುತ ಪ್ರಾಯೋಗಿಕವಾಗಷ್ಟೇ 46,000 ಅಗ್ನಿವೀರರ ನೇಮಕಾತಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಏರಿಕೆಯಾಗುತ್ತದೆ. ಬರುವವರ್ಷ 50-60 ಸಾವಿರ ನೇಮಕಾತಿ ನಡೆಯಬಹುದು ಹೀಗೆ ಕೆಲವೇ ವರ್ಷಗಳಲ್ಲಿ ಈ ಸಂಖ್ಯೆಯು 1.25 ಲಕ್ಷಕ್ಕೆ ಹೆಚ್ಚಾಗುತ್ತದೆ” ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಏರ್ ಮಾರ್ಷಲ್ ಎಸ್‌ಕೆ ಝಾ “ಅಗ್ನಿವೀರರ ಮೊದಲ ಬ್ಯಾಚ್ ನೋಂದಣಿ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗಲಿದೆ ಮತ್ತು ಜುಲೈ 24 ರಿಂದ ಮೊದಲ ಹಂತದ ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಮೊದಲ ಬ್ಯಾಚ್ ಅನ್ನು ಡಿಸೆಂಬರ್‌ನಲ್ಲಿ ನೋಂದಾಯಿಸಲಾಗುವುದು ಮತ್ತು ಡಿಸೆಂಬರ್ 30 ರೊಳಗೆ ತರಬೇತಿ ಪ್ರಾರಂಭವಾಗಲಿದೆ” ಎಂದು ಹೇಳಿದ್ದಾರೆ.

ನೌಕಾ ಸೇನೆಯ ವೈಸ್‌ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ಮಾತನಾಡಿ “”ನವೆಂಬರ್ 21 ರಿಂದ, ನೌಕಾಪಡೆಯ ಅಗ್ನಿವೀರ್‌ಗಳ ಮೊದಲ ಬ್ಯಾಚ್ ಒಡಿಶಾದ INS ಚಿಲ್ಕಾ ತರಬೇತಿ ಕೇಂದ್ರದಲ್ಲಿ ಪ್ರಾರಂಭವಾಗಲಿದೆ. ಲಿಂಗ ತಾರತಮ್ಯವಿಲ್ಲದೇ ಪುರುಷ ಮತ್ತು ಮಹಿಳಾ ಅಗ್ನಿವೀರ್‌ಗಳನ್ನು ನೇಮಿಸಿಕೊಳ್ಳಲಾಗುವುದು. ಪ್ರಸ್ತುತ 30 ಮಹಿಳಾ ಅಧಿಕಾರಿಗಳು ಸೇನೆಯ ನೌಕೆಗಳಲ್ಲಿ ಕರ್ತವ್ಯ ನಿರತರಾಗಿದ್ದು ಅಗ್ನಿಪಥದ ಮೂಲಕ ಮಹಿಳೆಯರನ್ನೂ ನೇಮಿಸಿಕೊಳ್ಳಲಾಗುತ್ತದೆ ಮತ್ತು ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಅಗ್ನಿಪಥ ಯೋಜನೆಯ ಪ್ರತಿಭಟನೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸೇನಾಧಿಕಾರಿಗಳು ಅಗ್ನಿಪಥ ಯೋಜನೆಯನ್ನು ಹಿಂಪಡೆಯಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. “ಭಾರತೀಯ ಸೇನೆಯ ಶಿಸ್ತಿನ ಅಡಿಪಾಯ. ಬೆಂಕಿ ಹಚ್ಚುವಿಕೆ, ವಿಧ್ವಂಸಕ ಕೃತ್ಯಗಳಿಗೆ ಜಾಗವಿಲ್ಲ. ಸೇನೆ ಸೇರಬಯಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯಗಳ ಭಾಗವಾಗಿರಲಿಲ್ಲ ಎಂದು ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದಲ್ಲದೆ, ರಕ್ಷಣಾ ಪಡೆಗಳಿಗೆ ಸೇರುವ ಮೊದಲು ಪೊಲೀಸ್ ಪರಿಶೀಲನೆ ಅತ್ಯಗತ್ಯ. ಆಕಾಂಕ್ಷಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೆ ಅಂಥವರು ಸೇನೆಗೆ ಸೇರಲು ಸಾಧ್ಯವಿಲ್ಲ” ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!