ಅಗ್ನಿಪಥ ಪ್ರತಿಭಟನೆ : ರೇಲ್ವೇ ಇಲಾಖೆಗೆ 700ಕೋಟಿ ನಷ್ಟ, 718 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಗ್ನಿಪಥ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ಹಿಂಸಾಚಾರಗಳು ನಡೆಯುತ್ತಿವೆ. ಬಿಹಾರದಲ್ಲಂತೂ ಉದ್ರಿಕ್ತ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹೆಚ್ಚಿದೆ. ಕೇವಲ ನಾಲ್ಕು ದಿನದಲ್ಲಿ ರೇಲ್ವೇ ಇಲಾಖೆಗೆ 700ಕೋಟಿ ರೂಪಾಯಿ ನಷ್ಟವಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ 11 ಇಂಜಿನ್‌ಗಳ ಜೊತೆಗೆ 60 ರೈಲುಗಳ ಬೋಗಿಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಇದಲ್ಲದೇ ರೈಲ್ವೇ ನಿಲ್ದಾಣಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ರೈಲ್ವೇಗೆ ಸೇರಿದ ಇತರೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ.

ರೇಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಒಂದು ಸಾಮಾನ್ಯ ಕೋಚ್ ನಿರ್ಮಿಸಲು 80 ಲಕ್ಷ ರೂ., ಸ್ಲೀಪರ್ ಕೋಚ್ ಮತ್ತು ಎಸಿ ಕೋಚ್‌ಗೆ ಕ್ರಮವಾಗಿ 1.25 ಕೋಟಿ ಮತ್ತು 3.5 ಕೋಟಿ ರೂ. ಒಂದು ರೈಲ್ ಇಂಜಿನ್ ನಿರ್ಮಿಸಲು 20 ಕೋಟಿ ರೂ. 12 ಬೋಗಿಗಳ ಪ್ಯಾಸೆಂಜರ್ ರೈಲಿಗೆ 40 ಕೋಟಿ ರೂ. ಮತ್ತು 24 ಬೋಗಿಗಳ ರೈಲಿಗೆ 70 ಕೋಟಿ ರೂ. ವೆಚ್ಚವಾಗುತ್ತದೆ. , ಆಸ್ತಿ ಹಾನಿಯ ಅಂದಾಜುಗಳನ್ನು ಇನ್ನೂ ಮಾಡಲಾಗುತ್ತಿದೆ ಎಂದು ಪೂರ್ವ ಮಧ್ಯಮ ರೇಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಂದ್ರ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ 60 ಕೋಟಿ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ಹಳಿಗಳ ಮೇಲಿನ ಅಡಚಣೆ ಮತ್ತು ರೈಲುಗಳ ರದ್ದತಿಯು ರೈಲ್ವೆಗೆ ದೊಡ್ಡ ಆರ್ಥಿಕ ಹೊಡೆತವನ್ನು ಉಂಟುಮಾಡಿದೆ.

ಇವುಗಳ ನಡುವೆ ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಬಿಹಾರದಲ್ಲಿ 250 ಕ್ಕೂ ಹೆಚ್ಚುಜನರನ್ನು ಬಂಧಿಸಲಾಗಿದೆ. ಮೂರು ದಿನಗಳಲ್ಲಿ ಒಟ್ಟು 138 ಎಫ್‌ಐಆರ್‌ಗಳು ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯಲ್ಲಿ ತೊಡಗಿರುವವರ ಬಂಧನಕ್ಕಾಗಿ ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!