Wednesday, August 10, 2022

Latest Posts

ಸಂಬಾರ ಬೆಳೆ| ಮುಂದಿನ ಎರಡು ತಿಂಗಳಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯ: ಇಲ್ಲಿದೆ ನೋಡಿ ಮಾಹಿತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ ಮತ್ತು ಸುಸ್ಥಿರತೆ ಸಾಧಿಸಲು ಆಯಾಯ ಪ್ರದೇಶದ ಹವಾಗುಣ ಆಧಾರದ ಮೇಲೆ ಕೃಷಿ ಕಾರ್ಯಾಚರಣೆಗಳ ಸಮಯೋಚಿತ ಯೋಜನೆ ಮತ್ತು ಅವುಗಳ ಅಳವಡಿಕೆ ಹೆಚ್ಚು ಅವಶ್ಯಕವಾಗಿದೆ. ಸಂಬಾರ ಬೆಳೆಗಳಲ್ಲಿ ಜೂನ್-ಜುಲೈ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯಗಳ ಬಗ್ಗೆ ಮಡಿಕೇರಿ ಸಮೀಪದ ಅಪ್ಪಂಗಳದಲ್ಲಿರುವ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಏಲಕ್ಕಿ ನರ್ಸರಿ: ಸಸಿ ಕೊಳೆಯುವ ರೋಗವನ್ನು ತಡೆಗಟ್ಟಲು ನೀರು ಬಸಿದು ಹೋಗುವ ಹಾಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಕಿಕ್ಕಿರಿದು ಬೆಳೆದಿರುವ ಸಸಿಗಳನ್ನು ತೆಳುವಾಗಿಸಬೇಕು. ಸಸಿ ಮಡಿಗಳಿಗೆ ಶೇ.0.25 ಕಾಪರ್ ಆಕ್ಸಿ ಕ್ಲೋರೈಡ್ ಸುರಿಯಬೇಕು ಬದಲಾಗಿ ಟ್ರೈಕೋಡರ್ಮ ಅಥವಾ ಸುಡೋಮೊನಸ್ 1 ಕಿ. ಗ್ರಾಂ. ಪ್ರತಿ ಸಸಿಮಡಿಗೆ ಹಾಕಬೇಕು. ಎಲೆ ಕೊಳೆಯುವ ರೋಗವನ್ನು ತಡೆಗಟ್ಟಲು ಶೇ. 0.5 ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು ಹಾಗೂ ಎಲೆ ಚುಕ್ಕಿ ರೋಗವನ್ನು ತಡೆಯಲು ಶೇ. 0.2 ಕಾಬೆರ್ಂಡಜಿಮ್ ಅನ್ನು ಸಿಂಪಡಿಸಬೇಕು.

ತೋಟ ನಿರ್ವಹಣೆ: ಈಗಾಗಲೇ ನೆರಳನ್ನು ತೆಗೆದಿರದಿದ್ದಲ್ಲಿ ಮರ ಕಪಾತು ಮಾಡಬೇಕು. ಕಳೆ ನಿಯಂತ್ರಣ ಮಾಡಬೇಕು ಮತ್ತು ಏಲಕ್ಕಿ ಗಿಡಗಳಲ್ಲಿ ಒಣಗಿದ ಎಲೆಗಳನ್ನು ತೆಗೆಯಬೇಕು. ಕಡಿಮೆ ನೆರಳಿರುವ ಜಾಗಗಳಲ್ಲಿ ನೆರಳಿನ ಗಿಡಗಳನ್ನು ನಾಟಿ ಮಾಡಬೇಕು. ಗಿಡಗಳಿಗೆ ಸರಿಯಾದ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ರಸಗೊಬ್ಬರ ನೀಡದಿದ್ದಲ್ಲಿ ಒಣಗಿದ ತರಗೆಲೆಯ ಹೊದಿಕೆಯನ್ನು ತೆಗೆದು, ಪುಷ್ಪಗುಚ್ಛಗಳನ್ನು ಸುತ್ತಿ, ಗೊಬ್ಬರ ನೀಡಬೇಕು.
ಲಘು ಪೋಷಕಾಂಶ ಐ.ಐ.ಎಸ್.ಆರ್. ಕಾರ್ಡಮಮ್ ಸ್ಪೆಷಲ್ 1 ಕೆ. ಜಿ. 200 ಲೀ ನೀರಿನಲ್ಲಿ ಕರಗಿಸಿ ಎಲೆಗಳಿಗೆ ಸಿಂಪಡಣೆ ಮಾಡಬೇಕು. ಶೇ. 1 ರ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಮೇ ತಿಂಗಳಿನಲ್ಲಿ ಸಿಂಪಡಿಸದಿದ್ದಲ್ಲಿ. ಕಟ್ಟೆ ಪೀಡಿತ ಗಿಡಗಳನ್ನು ಕಿತ್ತು ನಾಶಮಾಡಬೇಕು.

ಹೊಸ ಗಿಡಗಳ ನಾಟಿ ಮಾಡುವುದು: ಗುಂಡಿಗಳ 1/3 ಭಾಗ ಮೇಲ್ಮಣ್ಣು, 1/3 ಭಾಗ ಸಾವಯವ ಗೊಬ್ಬರ, 15 ಗ್ರಾಂ ಕಾರ್ಬೋಪ್ಯೂರಾನ್ / 50 ಗ್ರಾಂ ಬೇವಿನ ಹಿಂಡಿ ಮತ್ತು 100 ಗ್ರಾಂ ರಾಕ್ ಫಾಸ್ಪೇಟ್ ಬಳಸಬೇಕು.

ಕಾಳು ಮೆಣಸು ನರ್ಸರಿ:
ನರ್ಸರಿ ಗಿಡಗಳಿಗೆ ಮಳೆ ನೀರು ನೇರವಾಗಿ ಬೀಳದಂತೆ ನೋಡಿಕೊಳ್ಳಬೇಕು. ಗಿಡಗಳಿಗೆ ಶೇ.0.25 ಕಾಪರ್ ಆಕ್ಸಿ ಕ್ಲೋರೈಡ್ ಸುರಿಯಬೇಕು.ಬದಲಾಗಿ ಟ್ರೈಕೋಡರ್ಮ ಅಥವಾ ಸುಡೋಮೊನಸ್ ಅನ್ನು ಹಾಕಬಹುದು. ಎಲೆಗಳ ಮೇಲೆ ಫೈಟೋಪ್ತರಾ ಕೊಳೆ ರೋಗದ ಹಾನಿಯನ್ನು ತಡೆಯಲು ಶೇ. 0.1 ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೊಜೆಬ್ ಅಥವಾ ಶೇ.0.5 ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
ತೋಟ: ನೆರಳಿನ ನಿಯಂತ್ರಣ ಮಾಡುವುದು ಮತ್ತು ಗೊಬ್ಬರವನ್ನು ಈಗಾಗಲೆ ನೀಡದಿದ್ದಲ್ಲಿ ಗೊಬ್ಬರ ನೀಡಬೇಕು. ನೆಲದಲ್ಲಿ ಹಾದು ಹೋಗುವ ಹಂಬುಗಳನ್ನು / ಮೇಲಿನ ಕಾಂಡಗಳನ್ನು / ಬೇರೂರಿದ ಕಡ್ಡಿಗಳ ನಾಟಿಯನ್ನು ಕೈಗೊಳ್ಳಬೇಕು. ಜೂನ್ ತಿಂಗಳಿನಲ್ಲಿ ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. 0.5 ಕಿ. ಗ್ರಾಂ / 200 ಲೀ ನೀರಿನಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ ಅಥವಾ ಪೊಟ್ಯಾಷಿಯಂ ಫಾಸ್ಪೋನೆಟ್ (600 ಎಂ. ಎಲ್ / 200 ಲೀ) ಅನ್ನು ಕರಗಿಸಿ 5 ಲೀ ಪ್ರತಿ ಬಳ್ಳಿಗೆ ಸುರಿಯಬೇಕು.

ಜುಲೈ ತಿಂಗಳಿನಲ್ಲಿ ಗಿಡ ನೆಟ್ಟ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಫೈಟೋಪ್ತರಾ ಸೋಂಕು ತಗುಲಿದ ಹಾಗೂ ಅಕ್ಕಪಕ್ಕದ ಗಿಡಗಳಿಗೆ ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೋಜೆಬ್ (1.2 ಗ್ರಾಂ / ಲೀ) ದ್ರಾವಣವನ್ನು ಸಿಂಪಡಿಸಬೇಕು. 10-15 ದಿನಗಳ ನಂತರ ಇದೇ ದ್ರಾವಣವನ್ನು ಮತ್ತೊಂದು ಬಾರಿ ಸಿಂಪಡಿಸಬೇಕು. ಬಯಲು ಪ್ರದೇಶಗಳಲ್ಲಿ ಪೊಲ್ಲು ಕೀಟದ ಹಾವಳಿಯನ್ನು ತಪ್ಪಿಸಲು ಶೇ.0.05 ಕ್ವಿನಾಲ್ ಫಾಸ್ ದ್ರಾವಣವನ್ನು ಎಲೆಗಳ ಎಲ್ಲಾ ಬದಿಗಳು ನೆನೆಯುವಂತೆ ಸಿಂಪಡಿಸಬೇಕು.

ಶುಂಠಿ: ಕಳೆಯನ್ನು ತೆಗೆಯಬೇಕು ಮತ್ತು ಒಳಚರಂಡಿಯನ್ನು ಶುಚಿಗೊಳಿಸಬೇಕು. ಎರಡನೆಯ ಸುತ್ತಿನ ರಸಗೊಬ್ಬರವನ್ನು ನೀಡಬೇಕು ಹಾಗೂ ಗಿಡದ ಬುಡಕ್ಕೆ ಮಣ್ಣು ಏರಿಸಿ ಹಸಿರೆಲೆ ಹೊದಿಕೆಯನ್ನು ಹಾಕಬೇಕು. ಕಾಂಡ ಕೊರೆಯುವ ಹುಳುವನ್ನು ನಿಯಂತ್ರಿಸಲು ಶೇ.0.05 ಡೈಮೆಥೊಯೆಟ್ ದ್ರಾವಣವನ್ನು ಸಿಂಪಡಿಸಬೇಕು. ಕೊಳೆ ರೋಗ ಕಂಡುಬಂದಲ್ಲಿ, ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡುವುದು ಮತ್ತು ಶೇ.0.3 ಕಾಪರ್ ಆಕ್ಸಿ ಕ್ಲೋರೈಡ್ ದ್ರಾವಣವನ್ನು ಮಡಿಗಳಿಗೆ ಸುರಿಯಬೇಕು. ಲಘು ಪೋಷಕಾಂಶ ಐ.ಐ.ಎಸ್.ಆರ್. ಜಿಂಜರ್ ಸ್ಪೆಷಲ್ 1 ಕೆ. ಜಿ. 200 ಲೀ.ನೀರಿನಲ್ಲಿ ಕರಗಿಸಿ ನಾಟಿ ಮಾಡಿದ 60 ಮತ್ತು 90 ದಿನಗಳಿಗೊಮ್ಮೆ ಸಿಂಪಡಣೆ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರು ಐ.ಸಿ.ಎ.ಆರ್. ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ ದೂರವಾಣಿ ಸಂಖ್ಯೆ 08272 298574 ಇವರನ್ನು ಸಂಪರ್ಕಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss