ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರನ್ನು ಭೇಟಿಯಾದ ಮಾಜಿ ಸಚಿವ ಬಿ.ಎ.ಜೀವಿಜಯ!

ಹೊಸದಿಗಂತ ವರದಿ, ಮಡಿಕೇರಿ:

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದು, ಕೊಡಗಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಕೇರಳ ರಾಜ್ಯದ ಕಣ್ಣೂರಿನ ಅವರ ಸ್ವಗೃಹದಲ್ಲಿ ಭೇಟಿ ಮಾಡಿರುವ ಬಿ.ಎ.ಜೀವಿಜಯ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿರುವುದಾಗಿ ಹೇಳಲಾಗಿದೆ.

ಇವರೊಂದಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ.ಹಸೈನಾರ್ ಅವರೂ ಹಾಜರಿದ್ದರು.
ಜಾತ್ಯತೀತ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಬಿ.ಎ.ಜೀವಿಜಯ ಅವರು ಸೋಮವಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸುವುದರೊಂದಿಗೆ ಅರಣ್ಯ ಸಚಿವರಾಗಿದ್ದರು. ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕರಾಗಿರುವ ಜೀವಿಜಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ‌ ಸ್ಪರ್ಧಿಸಿದ್ದರಾದರೂ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪರಾಭವಗೊಂಡಿದ್ದರು.

ಈ ಸಂದರ್ಭ ಅವರು ಇದು ತಮ್ಮ ಕೊನೆಯ ಸ್ಪರ್ಧೆ ಎಂದು ಹೇಳಿಕೊಂಡಿದ್ದರಾದರೂ ಕ್ಷೇತ್ರದ ಮತದಾರರು ಅವರ ಕೈಹಿಡಿಯಲಿಲ್ಲ.
ಆದರೆ ಜಾತ್ಯತೀತ ಜನತಾದಳದಿಂದ ದೂರ ಸರಿದ ಜೀವಿಜಯ ತಾವೇ ಕಾಂಗ್ರೆಸ್’ನ ‘ಕೈ’ ಹಿಡಿದಿದ್ದರು. ಪ್ರಸಕ್ತ ಕಾಂಗ್ರೆಸ್’ನಲ್ಲಿ ಸಕ್ರಿಯರಾಗಿರುವ ಜೀವಿಜಯ ಅವರು ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುವ ಮಹದಾಸೆ ಇರಿಸಿಕೊಂಡಿದ್ದಾರೆನ್ನಲಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್’ನಲ್ಲೇ ವಿರೋಧವಿರುವುದಾಗಿ ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಜೀವಿಜಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!