ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ,ಮೈಸೂರು:
ಮೈಸೂರಿನಲ್ಲಿ ಗ್ಯಾಂಗ್ ರೇಪ್ಗೆ ಒಳಗಾಗಿರುವ ಸಂತ್ರಸ್ತೆಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ತಮ್ಮ ಇಲಾಖೆಯಿಂದ ನೆರವು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಶುಕ್ರವಾರ ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ, ವಿದ್ಯಾನಗರಿ ಎಂದು ಕರೆಯಲಾಗುತ್ತಿರುವ ಮೈಸೂರು ನಗರದಲ್ಲಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್ನಂತಹ ಹೇಯ ಕೃತ್ಯಕ್ಕೆ ನಾವೆಲ್ಲರೂ ತಲೆ ತಗ್ಗಿಸಬೇಕಿದೆ. ಗುರುವಾರ ಮಹಿಳಾ ಆಯೋಗದ ಅಧ್ಯಕ್ಷರೂ ಭೇಟಿ ಕೊಟ್ಟಿದ್ದಾರೆ. ನಮ್ಮ ಇಲಾಖೆಯ ಅಧಿಕಾರಿಗಳು ಕೂಡ ಸಂತ್ರಸ್ತೆಗೆ ನೆರವು ನೀಡಲು ಕ್ರಮ ವಹಿಸುತ್ತಿದ್ದಾರೆ. ಮಹಿಳೆಗೆ ಎಲ್ಲ ನೆರವು ನೀಡುವ ಕೆಲಸ ಆಗುತ್ತೆ. ಶನಿವಾರದ ಹೊತ್ತಿಗೆ ಇದಕ್ಕೆ ತಕ್ಕ ಉತ್ತರ ಕೊಡುವ ಭರವಸೆ ಇದೆ ಎಂದರು. ಪ್ರಕರಣದ ಆರೋಪಿಗಳ ಬಂಧನವಾಗಬೇಕು, ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಸವಾಲಾಗಿದೆ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಈ ರೀತಿಯ ಘಟನೆಗಳಿಂದ ಸಂತ್ರಸ್ತರಾಗುವ ಮಹಿಳೆಯರಿಗೆ ಕಾನೂನು ಹಾಗೂ ಆರೋಗ್ಯದ ನೆರವನ್ನು ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.