Tuesday, August 16, 2022

Latest Posts

ತಮಿಳುನಾಡಿನಲ್ಲಿ ಎಐಡಿಎಂಕೆ ನೇತೃತ್ವದ ಎನ್‍ಡಿಎ ಅಧಿಕಾರಕ್ಕೆ ಬರಲಿದೆ: ಸಿ.ಟಿ.ರವಿ ವಿಶ್ವಾಸ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ಸ್ಥಾನಗಳನ್ನು ಗಳಿಸಲಿದ್ದು, ಎಐಡಿಎಂಕೆ ನೇತೃತ್ವದ ಎನ್‍ಡಿಎ ಅಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಉಸ್ತುವಾರಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲ ಬಾರಿಗೆ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಕೀಯ ಕಾರ್ಯಸೂಚಿಯನ್ನು ರೂಪಿಸುವುದರಲ್ಲಿ ಮತ್ತು ನಮ್ಮ ವಿಚಾರಗಳನ್ನು ಆಧರಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳು ಯೋಚನೆ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಇದುವರೆಗೆ ಡಿಎಂಕೆ ನಾಸ್ತಿಕವಾದವನ್ನು ಮಾಡುತ್ತಾ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ತಮ್ಮ ಪ್ರಣಾಳಿಕೆಯಲ್ಲಿ ದೇವಸ್ಥಾನಗಳ ಬಗ್ಗೆ, ಅರ್ಚಕರ ಬಗ್ಗೆ, ಯಾತ್ರಾತ್ರಿಗಳಿಗೆ ಹಣ ಕೊಡುವ ಬಗ್ಗೆ ಪ್ರಸ್ತಾಪ ಮಾಡಿದೆ. ಇದರ ಯಶಸ್ಸು ತಮಿಳುನಾಡು ಬಿಜೆಪಿ ಘಟಕ ಹಾಗೂ ಅಲ್ಲಿನ ರಾಜ್ಯಾಧ್ಯಕ್ಷ ಮುರುಗನ್ ಅವರು ಮಾಡಿದ ವೆಟ್ರಿವೇಲ್ ಯಾತ್ರೆಗೆ ಸಲ್ಲುತ್ತದೆ ಎಂದರು.
ಡಿಎಂಕೆ ಪಕ್ಷದ ಉಪ ಘಟಕ ಡ್ರಾವಿಡ ಕಜಗಂ ವತಿಯಿಂದ ಭಗವಾನ್ ಮುರುಗನ್ ಅವರನ್ನು ಅವಹೇಳನ ಮಾಡುವ ಕೆಲಸ ಮಾಡಿದ್ದರು. ಅದರ ವಿರುದ್ಧ ಬಿಜೆಪಿ ವೆಟ್ರಿವೇಲ್ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಅದರ ಪರಿಣಾಮ ಹಿಂದೂಪರ ವಿಚಾರವನ್ನು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವ ಅನಿವಾರ್ಯತೆ ನಿರ್ಮಾಣವಾಯಿತು ಎಂದರು.
ಹೋದ ಕಡೆಗಳಲ್ಲೆಲ್ಲ ಈಗ ಎಲ್ಲಾ ಪಕ್ಷದವರು ಮುರುಗನ್ ಅವರ ಆಯುಧವನ್ನು ಹಿಡಿದು ಪ್ರದರ್ಶನ ಮಾಡುವಂತಾಯಿತು. ಇಂತಹ ಕಾರ್ಯಸೂಚಿ ರೂಪಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಇನ್ನು ಚುನಾವಣೆಯಲ್ಲಿ ಗೆಲ್ಲಬೇಕಿದೆ ಎಂದರು.
ತಮಿಳುನಾಡಿನಲ್ಲಿ 234 ಸ್ಥಾನಗಳ ಪೈಕಿ ಬಿಜೆಪಿ ಸ್ಪರ್ಧೆ ಮಾಡಿರುವುದು ಬರೇ 20 ಸ್ಥಾನಗಳಲ್ಲಿ ಮಾತ್ರ. ಉಳಿದ ಸ್ಥಾನಗಳನ್ನು ಎಐಡಿಎಂಕೆ ಮತ್ತು ಪಿಎಂಕೆ ಮಿತ್ರ ಪಕ್ಷಗಳು ಹಂಚಿಕೆ ಮಾಡಿಕೊಂಡಿವೆ. ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎನ್ನುವುದಕ್ಕಿಂತಲೂ ಎಷ್ಟರಲ್ಲಿ ಗೆಲ್ಲಬೇಕು ಎನ್ನುವುದಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟು 20 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದ ಕೆ.ಅಣ್ಣಾಮಲೈ ಅವರು ಅರವಕುರುಚ್ಚಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜನ ಬೆಂಬಲ ಉತ್ತಮವಾಗಿದೆ ಅವರು ಗೆಲ್ಲುತ್ತಾರೆ. ತಮಿಳುನಾಡಿನ ರಾಜಕೀಯಕ್ಕೆ ಒಂದು ಹೊಸ ನಾಯಕತ್ವವವನ್ನು ಅವರು ನೀಡುತ್ತಾರೆ ಎಂದರು.
ಸ್ಟಾಲಿನ್ ವ್ಯಕ್ತಿತ್ವವವನ್ನು ಹೋಲಿಕೆ ಮಾಡಿದರೆ ಡಿಎಂಕೆಗಿಂತಲೂ ಅವರು ದುರ್ಬಲರಾಗಿದ್ದಾರೆ. ವ್ಯಕ್ತಿಗತವಾಗಿ ನಾಯಕತ್ವ ಕೊಡುವ ಯಾವುದೇ ಲಕ್ಷಣ ಅವರಲ್ಲಿಲ್ಲ. ಕರುಣಾನಿಧಿ ಅವರ ಪುತ್ರ ಎನ್ನುವುದೊಂದೇ ಅವರಿಗಿರುವ ಪ್ಲಸ್ ಪಾಯಿಂಟ್, ಉಳಿದದ್ದೆಲ್ಲ ಮೈನಸ್ ಪಾಯಿಂಟ್‍ಗಳೇ ಎಂದರು.
ಚುನಾವಣೆಯಲ್ಲಿ ಯಾವಾಗಲೂ ಪ್ರಜಾಪ್ರಭುತ್ವ ಗೆಲ್ಲಬೇಕು. ಅದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತದೆ. ಕುಟುಂಬ ರಾಜಕಾರಣ ಸಹಜವಾಗಿರುವ ಪ್ರಾಕೃತಿಕ ನಾಯಕತ್ವವನ್ನು ಹೊಸಕಿ ಹಾಕುತ್ತದೆ. ರಕ್ತ ಸಂಬಂಧದ ನಾಯಕತ್ವ ಬೆಳೆಯುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss