ತಾಯಿಯ ಗರ್ಭದಲ್ಲಿದ್ದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ : ಏಮ್ಸ್‌ ವೈದ್ಯರ ಸಾಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವೈದ್ಯಕೀಯ ಜಗತ್ತಿಗೆ ಅಚ್ಚರಿ ಎನಿಸುವ ಸಾಧನೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)‌ ವೈದ್ಯರು ಮಾಡಿದ್ದು, ತಾಯಿ ಗರ್ಭದಲ್ಲಿರುವ ಮಗುವಿನ ದ್ರಾಕ್ಷಿ ಗಾತ್ರದಲ್ಲಿರುವ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಮಹಿಳೆಯೊಬ್ಬರು ಏಮ್ಸ್‌ಗೆ ದಾಖಲಾಗಿದ್ದರು. ಮಗುವಿನ ಹೃದಯದಲ್ಲಿ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದರು. ಮಗುವನ್ನು ಉಳಿಸಿಕೊಳ್ಳಲು ಮುಂದಾದ ದಂಪತಿ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.

ಏಮ್ಸ್‌ನ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್‌ನ ತಜ್ಞರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ತಾಯಿ ಹಾಗೂ ಭ್ರೂಣದ ಆರೋಗ್ಯ ಸ್ಥಿರವಾಗಿದೆ. ತಜ್ಞರ ತಂಡವು ತಾಯಿಯ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಈ ಪ್ರಕ್ರಿಯೆ ಮಾಡಲಾಗಿದ್ದು, ತಾಯಿಯ ಹೊಟ್ಟೆ ಮೂಲಕ ಮಗುವಿನ ಹೃದಯಕ್ಕೆ ಸೂಜಿ ಚುಚ್ಚಲಾಗಿದೆ. ಬಲೂನ್ ಕ್ಯಾತಿಟರ್ ಮೂಲಕ ರಕ್ತ ಪರಿಚಲನೆಗೆ ಅಡ್ಡಿಯಾಗಿದ್ದ ಕವಾಟವನ್ನು ತೆರೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಭ್ರೂಣವು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಹೊಂದಿ, ಪ್ರಸವದ ವೇಳೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ತಜ್ಞರು ಹೇಳಿದ್ದಾರೆ.

ಈ ಪ್ರಕ್ರಿಯೆಯನ್ನು ಅತೀ ನಾಜೂಕಿನಿಂದ ಮಾಡಲಾಗಿದ್ದು, ಅಲ್ಟ್ರಾಸೌಂಡ್‌ ಮಾರ್ಗದರ್ಶನದ ಮೂಲಕ ಮಾಡಲಾಗಿದೆ. ತ್ವರಿತವಾಗಿ ಪ್ರಕ್ರಿಯೆ ಮುಗಿಯಬೇಕಾಗಿದ್ದರಿಂದ ಭ್ರೂಣಕ್ಕೆ ಹಾನಿಯಾಗುವ ಸಾಧ್ಯತೆ ಕೂಡ ಹೆಚ್ಚಿತ್ತುಎಂಬುದನ್ನು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!