Sunday, April 18, 2021

Latest Posts

ಮಾಗಿದ ವಯಸ್ಸಿನಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟ ವಿಶ್ವದ ಹಿರಿಯ ಶಿಕ್ಷಕಿ ಲಕ್ಷ್ಮೀ‌

ನಾವೆಲ್ಲರೂ ಬಾಲ್ಯದಲ್ಲಿಯೇ ಮುಂದೆ ನಾವೇನಾಗಬೇಕು ಎಂಬುದನ್ನು ಯೋಚಿಸಿರುತ್ತೇವೆ. ಡಾಕ್ಟರ್, ಪೋಲಿಸ್, ಶಿಕ್ಷಕ ಹೀಗೆ ಏನಾದರೂ ಒಂದು ಆಗಬೇಕೆಂದು ಕನಸಿನ ಸೌಧ ಕಟ್ಟುತ್ತೇವೆ. ಆಯ್ಕೆಗಳು ಒಂದು ಹಂತದವರೆಗೂ ಬದಲಾಗದಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಪಠ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಇಷ್ಟಪಟ್ಟ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಲು ಬೇಕಾಗುವ ಪದವಿ ಪಡೆದು, ಒಂದು ಹಂತದ ಶಿಕ್ಷಣ ಮುಗಿಸಿಕೊಂಡು ವೃತ್ತಿ ಕ್ಷೇತ್ರಕ್ಕೆ ಕಾಲಿಡುತ್ತೇವೆ.

30- 35 ವರ್ಷ ಸುದೀರ್ಘವಾಗಿ ದುಡಿದು  ನೂರಾರು ಏಳು ಬೀಳುಗಳನ್ನು ದಾಟಿ ನಿವೃತ್ತ ಜೀವನಕ್ಕೆ ಕಾಲಿಡುತ್ತಿದ್ದಂತೆಯೇ ‌ ಒಂದು ನಿರಾಳ ಉಸಿರು ಚೆಲ್ಲುತ್ತೇವೆ. ಜೀವನದಲ್ಲಿ ಇನ್ನೇನು ಬೇಡ ಎಲ್ಲ ಮುಗಿಯಿತು ಎಂದು ಕೊನೆಯ ದಿನಗಳ ಎಣಿಕೆಗೆ ಬೆರಳುಗಳು ಸಾಲುಗಟ್ಟುತ್ತವೆ.  60 ಆಗುತ್ತಿದ್ದಂತೆಯೇ ನಮ್ಮ ಕಾಲ ಮುಗಿಯಿತು ಇನ್ನೇನಿದ್ದರು ಮಕ್ಕಳದ್ದು. ನಮ್ಮದೆಲ್ಲ ಇನ್ನೇನಿದೆ “ಕಾಡು ಬಾ ಎನ್ನುತ್ತಿದೆ, ನಾಡು ಹೋಗು ಎನ್ನುತ್ತಿದೆ” ಎಂದು ಇದ್ದ ಹುರುಪೆಲ್ಲ ಕಳೆದುಕೊಂಡವರಂತೆ ಮಾತನಾಡುತ್ತೇವೆ.

ಇಂಥಹ ಮನಸ್ಥಿತಿಗೆ ವಿರುದ್ಧವಾಗಿ ಇಲ್ಲೊಬ್ಬ ಮಹಿಳೆ ಇದ್ದಾರೆ. ಮಾಗಿದ ವಯಸ್ಸಿನಲ್ಲಿ ಬದುಕಿನ ತುಂಬ ಭರ್ತಿ ಉಲ್ಲಾಸ ತುಂಬಿಕೊಂಡು ಬದುಕುತ್ತಿರುವವರು. ಇವರು ವಿಶ್ವದಲ್ಲಿಯೇ ಅತ್ಯಂತ ಹಿರಿಯ ಭಾರತೀಯ ಶಿಕ್ಷಕಿ ಎಂಬ ಹೆಮ್ಮೆಯ ಗರಿ ಮುಡಿದಿದ್ದಾರೆ. ಅದರಲ್ಲೂ ಕರ್ನಾಟಕದವರೆಂಬುದು  ನಮಗೆಲ್ಲ ಹೆಮ್ಮೆ. ಇವರ ಹೆಸರು ಲಕ್ಷ್ಮೀ ಕಲ್ಯಾಣಸುಂದರಂ. ಮೂಲತಃ ಬೆಂಗಳೂರಿನವರು. ಅವರಿಗೆ ಈಗ 92 ವರ್ಷ ವಯಸ್ಸು. ತಮ್ಮ 67ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿಯೇ  ಶಿಕ್ಷಣ ವೃತ್ತಿಯನ್ನು ಆರಂಭಿಸಿ 25 ವರ್ಷಗಳಿಂದ ವಿಶೇಷ ಚೇತನ ಮಕ್ಕಳಿಗೆ ಪಾಠ ಮಾಡುತ್ತ, ಅವರ ಅಗತ್ಯಗಳಿಗೆ ಅಂಗೈ ಆಸರೆಯಾಗಿ 25 ವರ್ಷಗಳಿಂದ ಅವರೊಡನೆ  ಖುಷಿಯಿಂದ ಕಳೆಯುತ್ತಿದ್ದಾರೆ.

ಲಕ್ಷ್ಮೀ ಅವರಿಗೆ ಚಿಕ್ಕವರಿರುವಾಗಲೇ ಡಾಕ್ಟರ್ ಆಗಬೇಕು, ಇಲ್ಲದಿದ್ದರೆ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುವ ನರ್ಸ್ ಆಗಬೇಕೆಂದು ದೊಡ್ಡ ಆಸೆ ಇತ್ತು. ಆದರೆ  ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಕಡಿಮೆ ಅವಕಾಶಗಳಿತ್ತು. ಮನೆಯಲ್ಲಯೂ ಹೆಣ್ಣು ಮಕ್ಕಳು ಹೊರಗಡೆ ಕೆಲಸಕ್ಕೆ ಹೋಗುವುದಕ್ಕೆ ಒಪ್ಪುತ್ತಿರಲಿಲ್ಲ. ಲಕ್ಷ್ಮೀ ಅವರಿಗೆ 14 ವರ್ಷವಿರುವಾಗ  ಮನೆಯಲ್ಲಿ ಮದುವೆ ಮಾಡುತ್ತಾರೆ. ಡಾಕ್ಟರ್, ನರ್ಸ್ ಆಗಬೇಕೆಂಬ ಆಸೆಯನ್ನು ಅಲ್ಲಿಯೇ ಚಿಪುಟಿ, ಜೀವನದ ದೊಡ್ಡ ಭಾಗವನ್ನು ಪ್ರೀತಿಯ ಮಡದಿಯಾಗಿ, ಮೂವರು ಹೆಣ್ಣುಮಕ್ಕಳ ಮಮತೆಯ ತಾಯಿಯಾಗಿ ಕಳೆಯುತ್ತಾರೆ.

ಲಕ್ಷ್ಮೀ ಅವರು 67ನೇ ವಯಸ್ಸಿನಲ್ಲಿರುವಾಗ ಅವರ ಪತಿ ತೀರಿಕೊಳ್ಳುತ್ತಾರೆ. ಪತಿ ತೀರಿಕೊಂಡ ನಂತರ  ಅವರು ಜೀವನದಲ್ಲಿ ತನಗೂ ಬದಲಾವಣೆ ಬೇಕು. ನನ್ನ ಸಂತೋಷಕ್ಕಾಗಿ ನಾನು ಬದುಕಬೇಕು. ಸಮಾಜದ ಹಿತಕ್ಕಾಗಿ ದುಡಿಯಬೇಕು. ತೆರೆದ ಸಮಾಜದಲ್ಲಿ ಅಂತರ್ಮುಖಿಯಾಗಬೇಕು.   ಜೀವನ ಜಂಜಾಟದಿಂದ ಹೊರಬರಲು ಇದು ತನಗೆ ಸರಿಯಾದ ಸಮಯ ಎಂದು ನಿರ್ಧರಿಸುತ್ತಾರೆ. ವೃತ್ತಿ ಜೀವನವನ್ನು ಆರಂಭಿಸಲುವ ಆಲೋಚನೆ ಮಾಡುತ್ತಾರೆ. ಅದಕ್ಕಾಗಿ ಅವರು ವಿಶೇಷ ಚೇತನವುಳ್ಳ ಮಕ್ಕಳ ಶಾಲೆಗೆ ಶಿಕ್ಷಕಿಯಾಗುವ ನಿರ್ಧಾರ ಮಾಡುತ್ತಾರೆ. ಅದರಂತೆಯೇ ಬೆಂಗಳೂರಿನಲ್ಲಿ ವಿಶೇಷ ಚೇತನವುಳ್ಳ ಮಕ್ಕಳ ಶಾಲೆಗೆ ಪ್ರಾಧ್ಯಾಪಕಿಯಾಗುತ್ತಾರೆ. ಮಕ್ಕಳ ನೆಚ್ಚಿನ ಶಿಕ್ಷಕಿಯಾಗುತ್ತಾರೆ.

BBC World Service on Twitter: "Lakshmi Kalyanasundaram is still teaching at the ripe old age of 91… "

ಈ ಬಗ್ಗೆ ಲಕ್ಷ್ಮೀ ಅವರನ್ನು ಕೇಳಿದಾಗ ನಾನು ಅತ್ಯಂತ ತೃಪ್ತಿಕರ ಜೀವನವನ್ನು ನಡೆಸುತ್ತಿದ್ದೇನೆ. ನನ್ನ ವೃತ್ತಿ ಜೀವನ ನನಗೆ ಬಹಳ ಸಂತೋಷ ತಂದುಕೊಟ್ಟಿದೆ. ನಮ್ಮ ಅಗತ್ಯ ಯಾರಿಗಿದೆಯೋ, ಎಲ್ಲಿದೆಯೋ ಅಲ್ಲಿ ನಾವು ಕೆಲಸ ಮಾಡಬೇಕು. ಅಂಥ ಜಾಗದಲ್ಲಿ ನೆಮ್ಮದಿ, ತೃಪ್ತಿ ಎರಡೂ ಸಿಗುತ್ತದೆ. ನನಗೆ ಮೂರು ಹೆಣ್ಣು ಮಕ್ಕಳು, ಐದು ಮೊಮ್ಮಕ್ಕಳು, ಎರಡು ಮರಿ ಮೊಮ್ಮಕ್ಕಳು. ಇವರೊಟ್ಟಿಗೆ ನೆಮ್ಮದಿಯಿಂದ ಬದುಕುತ್ತಿದ್ದೇನೆ. ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು. ಇವರಿಗೆ ಗುರುವಾಗಿ, ತಾಯಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನನಗೆ ಹೆಮ್ಮೆ ಇದೆ. ದಿನವೂ ತೆರೆದ ಸಮಾಜದಲ್ಲಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತೇನೆ. ಹೊಸ ವಿಷಯಗಳನ್ನು ತಿಳಿಯುತ್ತಿದ್ದೇನೆ. ಬದುಕು ನಿತ್ಯವೂ ಹೊಸದಾಗಿಯೇ ಇದೆ ಅನಿಸುತ್ತದೆ

ನಾನು ಚಿಕ್ಕವಳಿರುವಾಗ ಮಹಿಳೆಯರಿಗೆ ಬಹಳ ಸೀಮಿತ ಹಕ್ಕುಗಳಿದ್ದವು. ಮನೆಯಿಂದ ಹೊರಕ್ಕೆ ಹೋಗಿ ದುಡಿಯುವ ಸ್ವಾತಂತ್ರ್ಯವಿರಲಿಲ್ಲ. ನನಗೆ ದುಡಿಯುವ ಮನಸ್ಸಿದ್ದರೂ ಅವಕಾಶವಿರಲಿಲ್ಲ. ಆದರೆ ಇಂದು ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿದೆ. ಆ ಎಲ್ಲ ಅವಕಾಶಗಳನ್ನೂ ನಾರಿಯರು ಸದುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತದೆ. ನಿಮಗೆ ಎಷ್ಟೇ ವಯಸ್ಸಾದರೂ ಕನಸನ್ನು ತಲುಪುವ ಪ್ರಯತ್ನ ಬಿಡಬೇಡಿ.

ಬಹಳ ಜನ ನನಗೆ ಈ ವಯಸ್ಸಲ್ಲಿ ಏಕೆ ಕೆಲಸ ಮಾಡುತ್ತೀರಿ ಎಂದು ಕೇಳುತ್ತಾರೆ. ಆಗೆಲ್ಲ ನಾನು ಹೇಳುವುದು ಇಷ್ಟೆ. “ನನಗೆ ವಯಸ್ಸಾಗಿರಬಹುದು, ನನ್ನ ಕನಸುಗಳಿಗಲ್ಲ” ದಿನವೂ ರಾತ್ರಿ ಮಲಗುವಾಗ ನಾಳೆ ಬೆಳಗ್ಗೆ ಏಳದಂತೆ ಮಾಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಆದರೆ ಬೆಳಗ್ಗೆ ಎದ್ದು ಎಂದಿನಂತೆಯೇ ಕಾಫಿ ಮಾಡಿಕೊಳ್ಳುತ್ತೇನೆ. ನಾವು ಅಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ. ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತದೆ ಎಂದು ಲಕ್ಷ್ಮೀ ಸರಳವಾಗಿ ಹೇಳುತ್ತಾರೆ.

ಕನಸು ಕಾಣುವುದಕ್ಕೆ ಹೇಗೆ ವಯಸ್ಸು ಅಡ್ಡಿಯಾಗುವುದಿಲ್ಲವೂ, ಹಾಗೇಯೇ ಕನಸು ನನಸಾಗಿಸಿಕೊಳ್ಳುವುದಕ್ಕೂ ವಯಸ್ಸು ಅಡ್ಡಿಯಾಗಬಾರದು. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಮನಸ್ಥಿತಿ. ಕನಸನ್ನು ತಲುಪಲು ಬೇಕಾಗುವ ನಿಮ್ಮ ಪ್ರಯತ್ನ, ಛಲ. ಯಾವ ವಯಸ್ಸಿನಲ್ಲಿ ಬೇಕಾದರೂ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟು ಲಕ್ಷ್ಮೀ ಕಲ್ಯಾಣಸುಂದರಂ ಎಷ್ಟೋ ಜನರಿಗೆ ಆದರ್ಶ ಚಿಲುಮೆಯಾಗಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss