ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಚಿತ್ರದುರ್ಗ:
ಮದ್ಯವ್ಯಸನಿಯೋರ್ವ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಹೆತ್ತ ತಾಯಿಯನ್ನೇ ಹತ್ಯೆಗೈದಿರುವ ಘಟನೆ ಮೊಳಕಾಲ್ಮೂರಿನಲ್ಲಿ ನಡೆದಿದೆ. ಮೊಳಕಾಲ್ಮೂರಿನಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಾಯಿ ರತ್ನಮ್ಮ (45) ಅವರನ್ನು 22 ವರ್ಷದ ಮಗ ಲೋಕೇಶ ಕೊಲೆ ಮಾಡಿದ್ದಾನೆ.
ಕುಡಿದ ಅಮಲಿನಲ್ಲಿ ಮನೆಗೆ ಬಂದ ಲೋಕೇಶ ಊಟದ ವಿಚಾರವಾಗಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಮದ್ಯಪಾನ ಮಾಡಲು ಮತ್ತಷ್ಟು ಹಣ ನೀಡುವಂತೆ ತಾಯಿಯನ್ನು ಪೀಡಿಸಿ, ಜಗಳ ಮಾಡಿದ್ದಾನೆ. ಹಣ ಕೊಡದ ಕಾರಣ ತಾಯಿಯ ಕೆನ್ನೆಗೆ ಹೊಡೆದಿದ್ದು, ಹೊಡೆತ ಬಿದ್ದ ರಭಸಕ್ಕೆ ರತ್ನಮ್ಮ ಮನೆಯ ಕಬ್ಬಿಣದ ಬಾಗಿಲಿನ ಮೇಲೆ ಬಿದ್ದಿದ್ದಾರೆ. ತಲೆಗೆ ತೀವ್ರವಾದ ಗಾಯವಾಗಿ ರಕ್ತ ಸ್ರಾವವಾಗಿ ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದೊಡನೆ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಪೊಲೀಸರು ಲೋಕೇಶನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.