spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸುಸ್ತಾಗಿಸಿ ಕೂರಿಸಿದ ‘ಆಧುನಿಕತೆ’ಯ ಅಲೆದಾಟ ಬಿಚ್ಚಿಟ್ಟಿತು ಆಲೆಮನೆಯ ನೆನಪಿನ ಬುತ್ತಿ…

- Advertisement -Nitte
  • ಕಾವ್ಯಾ ಜಕ್ಕೊಳ್ಳಿ

ಕಾರ್ತಿಕ ಮಾಸ ಮುಗಿಯುತ್ತಿದ್ದಂತೆಯೇ ಮಲೆನಾಡಿನ ಕೆಲವು ಊರಿನಲ್ಲಿ ಆಲೆಮನೆಯ ಗಾಣ ತಿರುಗಲು ಪ್ರಾರಂಭವಾಗುತ್ತದೆ. ಆಲೆಮನೆ ಪ್ರಾರಂಭವಾಗುತ್ತಿದ್ದಂತೆಯೇ ಊರಿಗೆ ಊರೇ ಚಟುವಟಿಕೆಯ ಗೂಡಾಗಿಬಿಡುತ್ತದೆ. ಪ್ರತಿಮನೆಯ ಮೂಲೆಯಲ್ಲೂ ಕಬ್ಬಿನ ಘಮಲು ಠಿಕಾಣಿ ಹೂಡಿರುತ್ತದೆ. ಇವತ್ತು    ನೆನಪುಗಳ ಸರಮಾಲೆಯಿಂದ ಮೂಡಿಬಂದ ಮುತ್ತಿನಂತಹ ನೆನಪೇ ಮಲೆನಾಡ ಗಂಡು ಹಬ್ಬದಂತಿರುವ ಆಲೆಮನೆ.
‌ ‌
ಈ ಆಲೆಮನೆ ಸಂಭ್ರವನ್ನು ಅತಿ ಹತ್ತಿರದಿಂದ ನೋಡಿದ್ದೇನೆ. ನಾನು ಏಳನೇ ತರಗತಿ ದಾಟುವವರೆಗೆ ನಮ್ಮ ಮನೆಯಲ್ಲಿಯೇ ಒಂದು ವಾರ ಭರ್ಜರಿ ಆಲೆಮನೆ ನಡೆಯುತ್ತಿತ್ತು. ಆದರೆ ‌ಇಂದು ಕಾಡು ಪ್ರಾಣಿಗಳ ಕಾಟ, ಆಳು ಕಾಳುಗಳ ಕೊರತೆ, ನೀರಿನ ಅಭಾವದಿಂದಾಗಿ ಕಬ್ಬಿನ ಗದ್ದೆ ನೆಲಸಮವಾಗಿದೆ. ಆಲೆಮನೆ ನೆನಪುಗಳ ಪುಟದಲ್ಲಿ ಬೆಚ್ಚಗೆ ಕುಳಿತಿದೆ.

ಆದರೆ ನಾನು ಚಿಕ್ಕವಳಿರುವಾಗಿನ ಕಾಲವೇ ಬೇರೆಯದಾಗಿತ್ತು.ಫೆಬ್ರುವರಿ, ಮಾರ್ಚ್ ಬರುತ್ತಿದ್ದಂತೆಯೇ ಕಬ್ಬಿನ ಗದ್ದೆಯ ಮಣ್ಣನ್ನು ಹದವಾಗಿಸಿ ಓಳಿ (ಮಣ್ಣಿನ ಹಂಪು) ಗಳನ್ನು ಮಾಡಿಕೊಂಡು ಕಬ್ಬಿನ ಬೀಜವನ್ನು ನೆಡುತ್ತಿದ್ದರು. ಓಳಿಗಳ ಮಧ್ಯದಲ್ಲಿ ಎರಡು ಅಡಿ ಆಳದ ಸಣ್ಣ ಕಾಲುವೆ ಇರುತ್ತಿತ್ತು. ಕಬ್ಬಿನ ಬೀಜ ಬೇರೂರಿ ಹಸಿರು ಫೈರನ್ನು ಹೊರಹಾಕುತ್ತಿದ್ದಂತೆಯೇ ಎರಡು, ಮೂರು ದಿನಗಳಿಗೊಮ್ಮೆ ಕಾಲುವೆಯಲ್ಲಿ ನೀರು ತುಂಬಿಸಿಡುತ್ತಿದ್ದರು. ಕಬ್ಬು ನಿಧಾನವಾಗಿ ನೀರು ಹೀರಿಕೊಳ್ಳುತ್ತಿತ್ತು. ಆ ದಿನಗಳಲ್ಲಿ ನಮಗೆ ಕೆಆರ್ ಎಸ್ ಗೆ ಹೋದ ಅನುಭವ. ಕೆಸರು ಗದ್ದೆಯಲ್ಲಿಯೇ ಬಿದ್ದು ಹೊರಳಾಡುತ್ತಿದ್ದೆವು.

ಎರಡು, ಮೂರು ತಿಂಗಳಿಗೆ ಕಬ್ಬು ಎದೆ ಎತ್ತರಕ್ಕೆ ಬೆಳೆದು ಬಿಡುತ್ತಿತ್ತು. ಕಬ್ಬಿನ ಬುಡ ಗಟ್ಟಿ ಆಗಲೆಂದು ಅಡಿ ಎತ್ತರಕ್ಕೆ ಮಣ್ಣು ಮತ್ತು ಗೊಬ್ಬರದ ಮಿಶ್ರಣವನ್ನು ಹಾಕುತ್ತಿದ್ದರು. ಸಪ್ಟೆಂಬರ್, ಅಕ್ಟೋಬರ್ ಹೊತ್ತಿಗೆ ಕಬ್ಬು ಈಡೀ ಜಾಗವನ್ನು ಆಕ್ರಮಿಸಿಕೊಂಡು ಸೊಕ್ಕಿನಿಂದ ಬೆಳೆದು ಹಚ್ಚ ಹಸಿರಾಗಿ ಕಾಣುತ್ತತ್ತು. ಆಗ ಮೂರು-ನಾಲ್ಕು  ಕಬ್ಬನ್ನು ಒಟ್ಟಿಗೆ ಸೇರಿಸಿ ಅದರದೇ ಉದ್ದದ ಗರಿಯಿಂದ ಕೆಳಮುಖಮಾಗಿ ಸೀರೆಯಂತೆ ಸುತ್ತುತ್ತಿದ್ದರು. ಈ ರೀತಿ ಮಾಡುವುದರಿಂದ ಕಬ್ಬು ಮತ್ತೂ ಚೆನ್ನಾಗಿ ಬೆಳೆಯುತ್ತಿತ್ತು. ಡಿಸೆಂಬರ್, ಜನವರಿ ಹೊತ್ತಿಗೆ ಮೈ ತುಂಬ ಸಿಹಿ ತುಂಬಿಕೊಂಡು ಡೊಂಕು ಡೊಂಕಾಗಿ ಕಬ್ಬು ಕಂಗೊಳಿಸುತ್ತಿತ್ತು. ಆಗಲೇ ರಾತ್ರಿ ಹಂದಿ, ನರಿಯ ಕಾಟ ಅತಿಯಾಗುವುದು. ಕಬ್ಬಿನ ಗದ್ದೆ ಕಾಯುವುದೇ ಒಂದು ಸವಾಲಾಗುತ್ತಿತ್ತು.

ಮನುಷ್ಯನ ವಾಸನೆ ಸೋಕಿದರೆ ಕಾಡುಪ್ರಾಣಿಗಳು ಬರುವುದಿಲ್ಲವೆಂದು ಕಬ್ಬಿನ ಗದ್ದೆಯ ಪಕ್ಕದಲ್ಲೆ ದೊಡ್ಡಪ್ಪನ ಮೋಳ (ಹುಲ್ಲಿನಿಂದ ಮಾಡಿದ ಎತ್ತರದ ಸಣ್ಣ ಅಟ್ಟಣಿಗೆ) ತಯಾರಾಗುತ್ತಿತ್ತು. ಅದಕ್ಕೆ ಬಿದುರಿನ ಏಣಿ. ರಾತ್ರಿ ಊಟದ ನಂತರ ಅಲ್ಲಿ ಮಲಗುವುದೇ ಒಂದು ಪುಳಕದ ಅನುಭವ.

ಫೆಬ್ರುವರಿ ಕೊನೆಯಲ್ಲಿ ಕಬ್ಬು ಚೆನ್ನಾಗಿ ಬಲಿತಿರುತ್ತಿತ್ತು. ಆಗಲೇ ನಮ್ಮ ಮನೆಯಲ್ಲಿ ಒಂದು ವಾರದ ಭರ್ಜರಿ ಆಲೆಮನೆ. ಗಾಣ (ಕಣೆ) ಕೊಪ್ಪರಿಗೆ, ಪಾಕದ ಮರಿಗೆ, ಡೊಂಕಿ(ಕೋಣ ಕಟ್ಟುವ ಉದ್ದದ ಕೋಲು) ಇವೆಲ್ಲವು ನಮ್ಮದೆ ಸ್ವಂತದಿತ್ತು. ಕೋಣಗಳು ಮಾತ್ರಾ ಭುಜಂಗನ ಮನೆಯದಾಗಿತ್ತು.

ಅಂಗಳದ ತುದಿಯಲ್ಲಿರುವ ಜೋಡಿ ಮತ್ತಿಮರದ ಹತ್ತಿರವೇ ಆಲೆಮನೆಯಂಗಳ. ಸೋಗೆಯ ಚಪ್ಪರ ಮಾಡಿ, ಆಲೆ ಒಲೆಗೆ ಮಣ್ಣು ಮೆತ್ತಿ, ಗಾಣ ಹೂಡುವ ಜಾಗವನ್ನೆಲ್ಲ ಸಗಣಿಯಿಂದ ಸಾರಿಸಿ, ಹಾಲು ಬರುವ ಮಾರ್ಗಕ್ಕೆ ಪೈಪ್ ಜೋಡಿಸಿ, ಕಬ್ಬಿನ ಹಾಲು ತುಂಬುವ ದೊಡ್ಡ ದೊಡ್ಡ ಡ್ರಮ್(ಬಾನಿ)ಯನ್ನು ಚೆನ್ನಾಗಿ ತೊಳೆದಿಡುತ್ತಿದ್ದರು. ಮನೆ ಮಂದಿಯಲ್ಲಾ ಆಲೆಮನೆ ಶೃಂಗರಿಸುತ್ತಿದ್ದರು.

ಬೆಳಗಿನ ಐದು ಗಂಟೆಗೆ ಅಜ್ಜ ಎದ್ದು ಮತ್ತಿಮರದ ಬುಡದಲ್ಲಿ ಕುಲದೇವರ ಹೆಸರಲ್ಲಿ ಎರಡು ತೆಂಗಿನ ಕಾಯಿಯನ್ನಿಟ್ಟು ಸಂಕಲ್ಪ ಮಾಡಿಕೊಂಡ ನಂತರ ಡೊಂಕಿಗೆ ಕೋಣವನ್ನು ಕಟ್ಟಿ ಗಾಣವನ್ನು ತಿರುಗಿಸುತ್ತಿದ್ದರು. ಭುಜಂಗ ಬಾರುಕೋಲು ಹಿಡಿದು ಕೋಣ ತಿರುಗಿಸುತ್ತಿದ್ದ. ಇನ್ನೊಬ್ಬ ಗಾಣದ ಬಾಯಿಗೆ ಕಬ್ಬು ಕೊಡುತ್ತಿದ್ದ. ಅಜ್ಜ ಕಬ್ಬಿನ ಹಾಲನ್ನು ಡ್ರಮ್ ಗೆ ತುಂಬಿಸುತ್ತಿದ್ದ. ಅಪ್ಪ, ದೊಡ್ಡಪ್ಪನ ನಾಯಕತ್ವದಲ್ಲಿ ನಾಲ್ಕು ಆಳುಗಳು ಕಬ್ಬು ಕಡಿದು ಆಲೆಮನೆಗೆ ತರುತ್ತಿದ್ದರು. ನಾನು ಅಕ್ಕ ಅಪ್ಪನ ಫುಲ್ ತೋಳಿನ ಅಂಗಿ ಹಾಕಿಕೊಂಡು ಕಬ್ಬಿನ ಗದ್ದೆಯಲ್ಲಿ ವೀರ ವನಿತೆಯರಂತೆ ತಿರುಗುತ್ತಿದ್ದೆವು. ಆಯಿ‌‌, ದೊಡ್ಡಾಯಿ, ಅಮ್ಮ ಒಮ್ಮೆ ಅಡುಗೆ ಮನೆಗೆ ಒಮ್ಮೆ ಆಲೆಮನೆಗೆಂದು ಹಿಂದೆ ಮುಂದೆ ಓಡಾಡುತ್ತ ಅಡುಗೆ ಸಿದ್ಧ ಪಡಿಸುತ್ತಿದ್ದರು.

ಸಾಯಂಕಾಲವಾಗುತ್ತಿದ್ದಂತೆಯೇ ನೆಂಟರಿಷ್ಟರು, ಊರವರು ಅವರಷ್ಟೆ ದೊಡ್ಡ ದೊಡ್ಡ ಕ್ಯಾನ್, ಪಾತ್ರೆ, ಬಾಟಲ್ ಹಿಡಿದು ಆಲೆಮನೆಗೆ ಹಾಜಾರಾಗುತ್ತಿದ್ದರು. ‘ಕರೆಯದೇ ಬರುವವನೇ ಅತಿಥಿ’ ಎಂಬುದು ಅವತ್ತು ಸಾಬೀತಾಗುತ್ತಿತ್ತು. ಊರಿನ ಮಕ್ಕಳು ಸಹ ಶಾಲೆ ಮುಗಿಸಿಕೊಂಡು ಬಂದು ಬಿಡುತ್ತಿದ್ದರು‌. ನಾವೆಲ್ಲರೂ ಒಂದೆಡೆ ಸೇರಿ ಉದ್ದನೆಯ ಕಬ್ಬುಗಳನ್ನು ತಿನ್ನುತ್ತಿದ್ದೆವು. ಅಜ್ಜ ಕೋಣನ ಕುಂಟೆ (ಕಬ್ಬಿನ ಜಾತಿ) ಕಬ್ಬು ಗಟ್ಟಿ ಇರುತ್ತದೆಂದು ಬೇರೆಯದನ್ನು ಆರಿಸಿ ಕೊಡುತ್ತಿದ್ದರೆ, ಅವನನ್ನು ಬದಿಸರಿಸಿ ಅದನ್ನೇ ತಿನ್ನುವ ಸಾಹಸ ಮಾಡುತ್ತಿದ್ದೇವು.

ತುಂಬಿಸಿದ್ದ ನಾಲ್ಕು ಡ್ರಮ್ ಹಾಲನ್ನು ಒಲೆಯ ಮೇಲಿದ್ದ ಕೊಪ್ಪರಿಗೆಗೆ ಸುರಿದು ಬೆಲ್ಲ ಮಾಡುತ್ತಿದ್ದರೆ ಆ ಪರಿಮಳ ಎಂಥವನನ್ನಾದರು ಆಸೆಬುರುಕನ್ನಾಗಿಸುತ್ತಿತ್ತು. ಚಪ್ಪರದಡಿಯಲ್ಲಿ ಸೊಪ್ಪಿನ ಕಂಬಳಿ ಹಾಸಿಡಲಾಗುತ್ತಿತ್ತು. ಎಲ್ಲರು ಸುತ್ತು ಕುಳಿತುಕೊಂಡು ಪಟ್ಟಂಗ (ಮಾತನಾಡುವುದು) ಹೊಡೆಯುತ್ತಿದ್ದರು. ಅಜ್ಜಿ ಈಗಷ್ಟೇ ಬೀಳುತ್ತಿದ್ದ ಕಬ್ಬಿನ ಹಾಲನ್ನು ಅರಿಸಿ ಅದಕ್ಕೆ ಲಿಂಬು, ಶುಂಠಿ ಹಾಕಿ ಉದ್ದ ಉದ್ದನೇಯ ಲೋಟದಲ್ಲಿ ತುಂಬ ಬಂದವರಿಗೆ ಕೊಡುತ್ತಿದ್ದಳು. ಗಿರಿ ಗಿರಿ ಮಂಡಕ್ಕಿ, ಚುಡುವಾ, ಬಾಳೆಕಾಯಿ ಸಂಡಿಗೆ,  ಸವತೆಕಾಯಿ ಗಾಲಿಗಳು, ಶೇಂಗಾ, ಚಿಪ್ಸ್ ಇವುಗಳ ಜೊತೆ ಕಬ್ಬಿನ ಹಾಲು ಮತ್ತು ತನ್ನ ರುಚಿಯನ್ನು ಹೆಚ್ಚಿಸಿಕೊಳ್ಳುತ್ತಿತ್ತು.

ನೆಂಟರೆಲ್ಲ ”ಭಾವಾ ಈ ಸಲಿ ಕಬ್ಬಿನ್ ಹಾಲು ಭಯಂಕರ್ ಶೀಯಿದ್ದಾ” ಎಂಬ ಉದ್ಗಾರದೊಂದಿಗೆ ಅದೆಷ್ಟು ಲೋಟ ಕುಡಿದು ಬಿಡುತ್ತಿದ್ದರೋ ಲೆಕ್ಕಕ್ಕೆ ಸಿಗದು. ಪಕ್ಕದಲ್ಲಿಯೇ ‘ಇನ್ನು ಬೇಕು ಐಸಾ ಮತ್ತೂ ಬೇಕು ಐಸ ಎನ್ನುತ್ತ ಒಲೆಯ ಮೇಲಿದ್ದ ಬಿಸಿ ಬಿಸಿ ಬೆಲ್ಲದ ಕೊಪ್ಪರಿಗೆಯನ್ನು ನಾಜೂಕಿನಿಂದ ಇಳಿಸುತ್ತಿದ್ದರು.

ಪಾಕದ ಮರಿಗೆಗೆ ಬಿಸಿ ಬಿಸಿ ಬೆಲ್ಲವನ್ನು ಹೊಯ್ಯುತ್ತಿದ್ದರೆ ನಾವು ಬಾಡಿಸಿದ ‘ಬಾಳೆ ದೊನ್ನೆ’  ಹಿಡಿದು ನೊರೆ ಬೆಲ್ಲಕ್ಕಾಗಿ‌ ಸಾಲು ಗಟ್ಟುತ್ತಿದ್ದೆವು. ಬಿಸಿ ಬಿಸಿ ನೊರೆಬೆಲ್ಲ ತಿಂದು ಪಾವನರಾಗುತ್ತಿದ್ದೆವು. “ಉಂಡು ‌ಹೋದ ಕೊಂಡು ಹೋದ ” ಎಂಬಂತೆ ಬಂದವರೆಲ್ಲ ಕ್ಯಾನ್ ತುಂಬಿಸಿಕೊಂಡು ಮನೆಗೆ ಹೊರಡುತ್ತಿದ್ದರು. ಕಬ್ಬಿನ ಹಾಲು ಹಂಚಿದರೆ ಮುಂದಿನ ವರ್ಷ ಇನ್ನೂ ಹೆಚ್ಚು ಬೆಳೆಯಾಗುತ್ತದೆ ಎಂಬ ನಂಬಿಕೆ.

ಆಲೆಮನೆಯ ಕೊನೆ ದಿನ ಮುಕ್ಕಾಲು ಭಾಗ ಕಬ್ಬಿನ ಹಾಲು ಅಡುಗೆ ಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿತ್ತು. ಹೆಂಗಸರು ಸೊಂಟ ಬಗ್ಗಿಸಿಕೊಂಡ ಮಾಡುವ ಅಕ್ಕಿಹಿಟ್ಟು ಕಬ್ಬಿನ ಹಾಲು ಮಿಶ್ರಣದ ಮಣ್ಣಿ. ಗಡುಗೆಯ ಮೈ ಮೇಲೆ ಎರೆಯುವ ಗರಿ ಗರಿ ತೋಡೆದೆವು. ಕಬ್ಬಿನ ಹಾಲು ದೋಸೆ, ಅದಕ್ಕೆ ತೆಳ್ಳನೆಯ‌‌ ಏಲಕ್ಕಿ ಘಮದ ಕಾಕಂಬಿ ಇವುಗಳನ್ನ ನೆನಪಿಸಿಕೊಂಡರೆ ಬಾಯಿಯ ಜೊಲ್ಲು ಪಾತಾಳವನ್ನು ಮುಟ್ಟುತ್ತದೆ.  ಆಲೆಮನೆ ಮುಗಿದು ಒಣಗಿದ ಕಬ್ಬಿನ ಬಲಿಗಳನ್ನು ಬೆಂಕಿ ಹೊತ್ತಿಸಿ ಸುಡುಮಣ್ಣು ಮಾಡುವಲ್ಲಿಗೆ ಆ  ವರ್ಷದ ಕಬ್ಬನ ಬೆಳೆಯ ಕತೆ ಮುಗಿಯುತ್ತದೆ.

ಅಂದಹಾಗೆ ಗರಿ ಗರಿ ಗಡಿಗೆ ತೊಡೆದೇವಿನ ಬಗ್ಗೆ ನಿಮಗೆ ಹೇಳಲೇ ಬೇಕು..

ಇಷ್ಟು ದಿನ ಅಟ್ಟ ಏರಿ ಕುಳಿತಿದ್ದ ಗಡಿಗೆ ಕೆಳಗಿಳಿದು ಶೇಂಗಾ ಎಣ್ಣೆ ಬಳಿದುಕೊಂಡು ಕುಳಿತಿದೆ ಎಂದರೆ ಆ ಮನೆಯಲ್ಲಿ ಇವತ್ತು ತೊಡೆದೇವು ಕಂಬಳ ಎಂದರ್ಥ. ಈ ತೊಡೆದೇವು ಯಾರಿಗೆ ಇಷ್ವಿಲ್ಲ ಹೇಳಿ? ನೆನಪಿಸಿಕೊಂಡರೆ ಬಾಯಲ್ಲಿ ಚೌಳು ನೀರು ಬರುತ್ತದೆ. ಮಲೆನಾಡಿನ ಸಾಂಪ್ರದಾಯಿಕ ತಿನಿಸುಗಳಲ್ಲಿ ಇದೂ ಒಂದು. ಆದರೆ ಇದು ಸುಲಭಕ್ಕೆ ದಕ್ಕುವ ತಿನಿಸಲ್ಲ. ಕಟ್ಟಿಗೆ ಒಲೆಯ ಮುಂದೆ ಬೆವರಿಳಿಸಬೇಕು, ಒರಳು ಕಲ್ಲಿನಲ್ಲಿ ನುಣ್ಣಗೆ ರುಬ್ಬಬೇಕು, ಗಡಿಗೆ ಹೊರಭಾಗದಲ್ಲಿ ಎರೆಯುವ ಚಾಣಾಕ್ಷತೆ ಬೇಕು ಇಷ್ಟಲ್ಲ ಮಾಡಿದರೆ ಮಾತ್ರ ಗರಿಗರಿ ತೊಡದೇವು ತಯಾರಾಗುತ್ತದೆ.

ಹಾಗಾದರೆ ಈ ತೊಡೆದೇವು ಮಾಡುವುದು ಹೇಗೆ?

ಅಕ್ಕಿಯನ್ನು ಚೆನ್ನಾಗಿ ಆರು ತಾಸು ನೆನೆಸಿಡಬೇಕು. ಅಕ್ಕಿ ನೆನೆದ ಮೇಲೆ ಕಬ್ಬಿನ ಹಾಲನ್ನು ಹಾಕಿ ತೇಯ್ದ ಗಂಧದ ಹದಕ್ಕೆ ಒರಳು ಕಲ್ಲಿನಲ್ಲಿ ರುಬ್ಬಬೇಕು.  ಆ ನಂತರ ರುಬ್ಬಿಕೊಂಡಿರುವ ಅಕ್ಕಿ ಹಿಟ್ಟಿಗೆ ಆಲೆಮನೆ ಬೆಲ್ಲ, ಏಲಕ್ಕಿ ಪುಡಿ, ಅರಿಶಿಣ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಬಳಿಕೆ ಉರಿಯುತ್ತಿರುವ ಕಟ್ಟಿಗೆ ಒಲೆಯ ಮೇಲೆ ಗಡಿಗೆಯನ್ನು ಬೋರಲು ಹಾಕಿ ಶೇಂಗಾ ಎಣ್ಣೆ ಹಚ್ಚಬೇಕು. ನಂತರ ಒಂದು ಕೋಲಿಗೆ ತೆಳುವಾದ ಬಟ್ಟೆಯನ್ನು ಬಾವುಟದಂತೆ ಕಟ್ಟಿಕೊಳ್ಳಬೇಕು. ನಂತರ ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ ಕಾದಿರುವ ಬೋರಲು ಗಡಿಗೆಯ ಮೇಲೆ ಪ್ಲಸ್ ಆಕಾರದಲ್ಲಿ ಎರೆಯಬೇಕು. ಒಂದೆರಡು ನಿಮಿಷದಲ್ಲಿ ಅದು ಬೆಂದು ಬಂಗಾರದ ಬಣ್ಣಕ್ಕೆ ಬರುತ್ತದೆ. ಹಾಳೆಕಡಿ (ಅಡಿಕೆ ಮರದ ಹಾಳೆಯ ಒಂದು ಭಾಗ) ಬಳಸಿ ಅದನ್ನು ಗಡಿಗೆಯಿಂದ ತೆಗೆದು ತ್ರಿಕೋಣಾಕಾರದಲ್ಲಿ ಮಡಿಚಿಡಬೇಕು. ಗಾಳಿ ತಾಕುತ್ತಿದ್ದಂತೆಯೇ ಅದು ಗರಿಗರಿಯಾಗುತ್ತದೆ. ಅದನ್ನು ಹಾಲು, ತುಪ್ಪದ ಜೊತೆ ತಿಂದರೆ ಅದ್ಭುತ ರುಚಿ

ಮೊದಲೆಲ್ಲ ನಮ್ಮೊರಿನಲ್ಲಿ ಪ್ರತಿ ಮನೆಯಲ್ಲಿಯು ಆಲೆಮನೆ ಇರುತ್ತಿತ್ತು. ಆಲೆಮನೆ ವೈಭವದ ಜಾತ್ರೆಯಾಗಿತ್ತು. ಆದರೆ ಈಗ ಕಣ್ಣರಳಿಸಿ‌ ನೋಡಿದರೆ ಊರಿಗೆ ಒಂದೊ ಎರಡೋ ಆಲೆಮನೆ ಕಾಣುತ್ತದೆ. ಸಂಭ್ರಮ, ಹುಡುಗಾಟ, ಕೀಟಲೆ ಯಾವುದು ಇಲ್ಲ. ಕೋಣದ ಜಾಗದಲ್ಲಿ ಆಧುನಿಕ ಪವರ್ ಟಿಲ್ಲರ್ ಬಂದಿದೆ.  ಬೆಳಗಿನ ಜಾವಕ್ಕೆ ತಿರುಗುತ್ತಿದ್ದ ಗಾಣ ಸೂರ್ಯ ನೆತ್ತಿಗೆ ಬಂದಮೇಲೆ ತಿರುಗುತ್ತಿದೆ. ಲೋಟಗಟ್ಟಲೆ‌ ಕಬ್ಬಿನ ಹಾಲು ಕುಡಿಯುವ ತಾಕತ್ತು ಯಾರಿಗೂ ಇಲ್ಲ. ಸೊಂಟ ಬಗ್ಗಿಸಿ ತೊಡೆದೇವು ಮಾಡುತ್ತಿದ್ದವರಿಗೆ ಇಂದು ಸೊಂಟ ನೋವು. ಆದರೆ ತುಟಿಯಂಚಲ್ಲಿ ಬೆಲ್ಲದ ಅಂಟು, ಕಬ್ಬಿನ ಹಾಲ ರುಚಿ ಹಾಗೆಯೆ ಇದೆ. ಆಲೆಮನೆ ನೆನಪಾದಾಗಲೆಲ್ಲಾ ಬಾಯಿ ಚಪ್ಪರಿಸುವಂತಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss