ಹೊಸದಿಗಂತ ವರದಿ,ಮಂಗಳೂರು:
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಒಂದು ವರ್ಗದ ತುಷ್ಟೀಕರಣಕ್ಕಾಗಿ ರೈತರಿಗೆ ವಕ್ಫ್ ಭೂಮಿ ಎಂದು ನೋಟಿಸ್ ನೀಡಿ, ವಿರೋಧ ಬಂದಾಗ ವಾಪಸು ಪಡೆದಿದೆ. ವಕ್ಫ್ ಆಸ್ತಿಗೆ ಸಂಬಂಧಿಸಿ ೨೦೧೨ರ ವರದಿ ಅಂಗೀಕರಿಸಿ ತನಿಖೆ ನಡೆಸಿದರೆ ಎಲ್ಲ ಅತಿಕ್ರಮಣ ಹೊರಗೆ ಬರಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದರು.
೨೦೧೨ರ ವರದಿಯಂತೆ ರಾಜ್ಯದಲ್ಲಿ ಒಟ್ಟು ೫೪ ಸಾವಿರ ಎಕರೆ ವಕ್ಫ್ ಅಧಿಸೂಚಿತ ಭೂಮಿಯಲ್ಲಿ ೨೯ ಸಾವಿರ ಎಕರೆ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ವಕ್ಫ್ ಮಂಡಳಿ ವಶಕ್ಕೆ ನೀಡಬೇಕು ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ, ವಕ್ತಾರ, ಆಯೋಗದ ಅಧ್ಯಕ್ಷ ಮೊದಲಾದ ಜವಾಬ್ದಾರಿಯಲ್ಲಿದ್ದ ಅನ್ವರ್ ಮಾಣಿಪ್ಪಾಡಿ ರಾಜ್ಯಾದ್ಯಂತ ಸಂಚರಿಸಿ ಬಹಳಷ್ಟು ಶ್ರಮಿವಹಿಸಿ ವಕ್ಫ್ ವರದಿ ಸಿದ್ಧಪಡಿಸಿದ್ದು, ಅದನ್ನು ರಾಜ್ಯದ ಲೋಕಾಯಕ್ತ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಸರಕಾರ ಕೂಡಾ ಅಂಗೀಕರಿಸಿ, ತನಿಖೆ ನಡೆಸಲಿ. ಎಷ್ಟೇ ಪ್ರಭಾವಿಗಳು ಅತಿಕ್ರಮಣ ಮಾಡಿದರೂ ತೆರವು ಮಾಡಿಸಲಿ ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ದೇಶದ ಹಿತದೃಷ್ಟಿ ಇರುವವರ ಪರವಾಗಿ ನಾನಿದ್ದೇನೆ. ಕೇಂದ್ರ ಸರಕಾರದ ವಕ್ಫ್ ಕಾನೂನಿನ ತಿದ್ದುಪಡಿ, ದೇಶಾದ್ಯಂತ ನಡೆಯುತ್ತಿರುವ ವಕ್ಫ್ ಚಿಂತನ ಮಂಥನ, ಹೋರಾಟವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕರಾವಳಿಯ ಜನ, ಮಠಾಧಿಶರು ಎಚ್ಚೆತ್ತಿಲ್ಲ. ನಮಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನಿದ್ದರೆ ನಾಳೆ ನಿಮ್ಮ ಆಸ್ತಿಯೂ ವಕ್ಫ್ ಗೆ ಹೋಗಿ ಅನಾಹುತ ನಡೆಯಲಿದೆ. ರೈತರು ಭೂಮಿ ಉಳಿಸಲು ಹೈಕೋರ್ಟ್ ಪೀಠಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ವಕೀಲರ ನೇಮಕ ಮಾಡಿದ್ದೇವೆ. ಸರಕಾರ ೩೨೮ ಖಬರಸ್ತಾನಕ್ಕೆ ನೀಡಿರುವ ಭೂಮಿ ವಾಪಸ್ ಪಡೆಯಬೇಕು. ವಕ್ಫ್ ಆಸ್ತಿಗೆ ಬೇಲಿ ಹಾಕಲು ೩.೫ ಕೋಟಿ ರೂ. ನೀಡಿರುವುದು ಸರಿಯಲ್ಲ ಎಂದರು.
ಅನ್ವರ್ ಮಾಣಿಪ್ಪಾಡಿ ಮಾತನಾಡಿ, ನಾನು ನೀಡಿದ ವರದಿಯಂತೆ ೨೪ ಸಾವಿರ ಎಕರೆ ವಕ್ಫ್ ಆಸ್ತಿ ಮಾತ್ರ ಉಳಿದಿತ್ತು. ಹಾಗಾದರೆ ಸರಕಾರ ರೈತರ ೧.೬೦ ಲಕ್ಷ ಎಕರೆ ಜಮೀನಿಗೆ ನೋಟಿಸ್ ಹೇಗೆ ನೀಡಿತು? ಏಕೆ ಹಿಂದಕ್ಕೆ ಪಡೆಯಿತು? ಅಲ್ಪಸಂಖ್ಯಾತರು- ಬಹುಸಂಖ್ಯಾತರ ಮಧ್ಯೆ ಬೆಂಕಿ ಹಚ್ಚಲು ಈ ಪ್ರಯತ್ನ ಮಾಡಿದೆಯೇ? ಇದೆಲ್ಲದರ ತನಿಖೆಗೆ ಮೊದಲು ನಾನು ಕೊಟ್ಟ ವರದಿ ಜಾರಿಗೆ ತಂದರೆ, ಹಾಲು- ನೀರು ಬೇರ್ಪಡೆಯಾಗಲಿದೆ ಎಂದರು.
ಏಷ್ಯಾದಲ್ಲೇ ೧೭ನೇ ಸ್ಥಾನದಲ್ಲಿದ್ದ ಬೀದರ್ ಕಬರಸ್ತಾನದ ಬಹುತೇಕ ಜಮೀನು ಸೇರಿದಂತೆ ರಾಜ್ಯಾದ್ಯಂತ ಪ್ರಭಾವಿ ರಾಜಕಾರಣಿಗಳು ಆಸ್ತಿ ಲೂಟಿ ಮಾಡಿದ್ದಾರೆ. ವಕ್ಫ್ ಆಸ್ತಿ ಉಸ್ತುವಾರಿ ನೋಡಲೆಂದು ನೇಮಿಸಿದ್ದ ಮುತವಲ್ಲಿಗಳೇ ಆಸ್ತಿ ಮಾರಾಟ ಮಾಡಿದ್ದಾರೆ. ನಾನು ಕೊಟ್ಟಿರುವ ಏಳು ಸಾವಿರ ಪುಟಗಳ ವರದಿಯಲ್ಲಿ ಪ್ರತಿಯೊಂದು ಆಸ್ತಿಯ ವಿವರವಿದೆ. ವಕ್ಫ್ ಆಸ್ತಿ ಉಳಿಸುವ ಒಳ್ಳೆಯ ಅವಕಾಶವನ್ನು ಬಿಜೆಪಿ ಕೈ ಚೆಲ್ಲಿದೆ. ಕೇಂದ್ರ ಸರಕಾರದ ವಕ್ಫ್ ಕಾಯಿದೆಯ ಎಲ್ಲ ೪೪ ತಿದ್ದುಪಡಿಗಳನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಅಡ್ಯಾರ್, ವಿಭಾಗ ಅಧ್ಯಕ್ಷ ಮಧುಸೂದನ ಉರ್ವ, ಜಿಲ್ಲಾಧ್ಯಕ್ಷ ಅರುಣ್ ಕದ್ರಿ ಉಪಸ್ಥಿತರಿದ್ದರು.