ದಿಗಂತ ವರದಿ ದಾವಣಗೆರೆ:
ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೂ ಸರ್ಕಾರಿ ಬಸ್ ಸೇವೆ ಪುನಾರಂಭಿಸುವ ಜೊತೆಗೆ ಶಿಷ್ಯವೇತನ ಬಿಡುಗಡೆ, ಹಾಸ್ಟೆಲ್ಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆರಂಭಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಗುರುವಾರ ನಗರದಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಅಭಾವಿಪ ನೇತೃತ್ವದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು, ಎಸಿ ಮಮತಾ ಹೊಸಗೌಡರ್ ಮುಖಾಂತರ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ 2 ವರ್ಷಗಳ ನಂತರ ಶಾಲಾ-ಕಾಲೇಜುಗಳು ಹಂತ-ಹಂತವಾಗಿ ಆರಂಭವಾಗುತ್ತಿವೆ. ಹೀಗಾಗಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಾಮಗಳಿಗೆ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆಯನ್ನು ಪುನಾರಂಭಿಸಬೇಕು. ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ಗಳನ್ನು ಹೆಚ್ಚಿಸಬೇಕು ಎಂದು ಸಂಘಟನೆ ಮುಖಂಡರು ಆಗ್ರಹಿಸಿದರು.
ಎಲ್ಲಾ ಜಿಲ್ಲೆಗಳಲ್ಲೂ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಎಲ್ಲಾ ಶಾಲಾ-ಕಾಲೇಜು, ವಿವಿಗಳು ಶುರುವಾಗಿವೆ. ಭೌತಿಕ ತರಗತಿಗಳು ಆರಂಭದ ಬಳಿಕ ಸಮಸ್ಯೆಗಳು ಉಲ್ಬಣಿಸುತ್ತಿವೆ. ವಿದ್ಯಾರ್ಥಿಗಳು ಕಲಿಕೆ ಕಡೆಗೆ ಉತ್ಸಾಹದಿಂದ ಗಮನ ಹರಿಸಿದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಬರಲು ಆಗುತ್ತಿಲ್ಲ. ಕೆಎಸ್ಸಾರ್ಟಿ್ಸಿ ಬಸ್ ಸೇವೆ ಇದ್ದರೂ ಸಹ ಲಾಕ್ಡೌನ್ ಜಾರಿಗೊಂಡ ನಂತರ ಸ್ಥಗಿತಗೊಂಡಿದ್ದ ಗ್ರಾಮೀಣ
ಸಾರಿಗೆ ಸೇವೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ದಿನಕ್ಕೆ ಒಂದೋ, ಎರಡೋ ಬಸ್ ಮಾತ್ರ ಸಂಚರಿಸುತ್ತಿವೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಡಿಪ್ಲೋಮಾ, ಇಂಜಿನಿಯರಿಂಗ್, ಸ್ನಾತಕ, ಸ್ನಾತಕೋತ್ತರ ತರಗತಿಗಳಲ್ಲಿ ಹಾಗೂ ಪಿಹೆಚ್ಡಿಮಾಡುತ್ತಿರುವ ಪರಿಶಿಷ್ಟ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಿಷ್ಯವೇತನ ಸಿಗದೇ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಈ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲಾ ವಿದ್ಯಾರ್ಥಿ ವೇತನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಬೇಕು. ಈ ಬಗ್ಗೆ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು. ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಗೊಳಪಡುವ ಹಾಸ್ಟೆಲ್ಗಳ ಸಂಖ್ಯೆ ಮತ್ತು ಹಾಸ್ಟೆಲ್ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ
ವಿದ್ಯಾರ್ಥಿಗಳ ಸಂಖ್ಯೆಗೂ ತುಂಬಾ ಅಂತರವಿದೆ. ಬಡ, ಪ್ರತಿಭಾವಂತ, ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸ್ಟೆಲ್ ಸಮಸ್ಯೆ ನೀಗಿಸಲು ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ಈ ವರ್ಷ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ್ಟೆಲ್ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕಳೆದ ವರ್ಷ ಕೇವಲ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ ಇತ್ತು. ಇನ್ನುಳಿದ 11 ಲಕ್ಷ ವಿದ್ಯಾರ್ಥಿಗಲು ಅವಕಾಶ
ವಂಚಿತರಾಗಿದ್ದರು. ಈ ಸಲ ಹಾಗಾಗದಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆ ಹೆಚ್ಚಿಸಿ, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಅವರು ಮನವಿ
ಮಾಡಿದರು. ಅಭಾವಿಪ ಮುಖಂಡರಾದ ಎನ್.ಆಕಾಶ್, ಶಶಾಂಕ್, ಕೊಟ್ರೇಶ, ದೊಡ್ಡೇಶ, ಆಕಾಶ ಈ.ಇಟಗಿ ಇತರರು ಹಾಜರಿದ್ದರು.