Saturday, July 2, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ: ವಿವಿಧೆಡೆ ಹಾನಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಇಳಿಮುಖವಾಗಿದ್ದ ಮಳೆ ಭಾನುವಾರ ಮತ್ತೆ ಬಿರುಸು ಪಡೆದಿದ್ದು, ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಜು.20ರಂದು ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ನಗರದಲ್ಲಿ ಶನಿವಾರ ತಡರಾತ್ರಿ ಆರಂಭಗೊಂಡ ಮಳೆ ಭಾನುವಾರ ರಾತ್ರಿವರೆಗೆ ಎಡೆಬಿಡದೇ ಸುರಿಯುತ್ತಲೇ ಇತ್ತು. ಇಡೀ ದಿನ ಮೋಡ ಕವಿದ ವಾತಾವರಣದೊಂದಿಗೆ ಗಾಳಿ ಸಹಿತ ನಿರಂತರ ಪುನರ್ವಸು ವರ್ಷಧಾರೆಯಾಗಿದೆ. ಭಾರಿ ಮಳೆಗೆ ಚಳಿಯ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ಮಳೆ ಮುಂದುವರೆದರೆ ಪ್ರವಾಹ ಸಾಧ್ಯತೆಯಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಹಾನಿ ಸಂಭವಿಸಿದೆ. ಭಾನುವಾರವೂ ಅನೇಕ ಕಡೆ ಗುಡ್ಡ ಕುಸಿತ ಉಂಟಾಗಿದ್ದು, ವಿದ್ಯುತ್ ಕಂಬ-ಮರಗಳು ನೆಲಕ್ಕೆ ಉರುಳಿವೆ. ಭಾನುವಾರ ದೊರೆತ ಮಾಹಿತಿಯಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 3 ಮನೆಗಳು ಸಂಪೂರ್ಣ ನೆಲಸಮವಾಗಿದ್ದರೆ, 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ ಜಾನಕಿ ಎಂಬವರ ಮನೆ ಸಮೀಪದ ದನದ ಹಟ್ಟಿಗೆ ಹಾನಿಯಾಗಿದೆ. ಕುಂಜತ್ತಬೈಲ್ ಗ್ರಾಮದ ಬಸವನ ನಗರದ ಜಯಲಕ್ಷ್ಮಿ ಎಂಬವರ ಮನೆಗೆ, ಬಪ್ಪನಾಡು ಗ್ರಾಮದ ಬಾಳೆಹಿತ್ಲು ಎಂಬಲ್ಲಿನ ಶಾಂತಾ ಎಂಬವರ ಮನೆಗೆ, ಮಂಜನಾಡಿ ಗ್ರಾಮದ ಮನೆಗೆ ಗುಡ್ಡ ಕುಸಿದ ಪರಿಣಾಮ ಭಾಗಶಃ ಹಾನಿಯಾಗಿದೆ. ಬಳ್ಕುಂಜೆ ಗ್ರಾಮದ ಗೋಪಾಲ ಭಂಡಾರಿ ಎಂಬವರ ಬಾವಿ ಕುಸಿದು ಅಪಾರ ನಷ್ಟವಾಗಿದೆ. ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಜ್ಜಿನಡ್ಕದ ತೋಡಿನ ಬದಿಯ ತಡೆಗೊಡೆ ಕುಸಿದ ಪರಿಣಾಮ ಇದಕ್ಕೆ ಹೊಂದಿಕೊಂಡ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಂಗಳೂರು ಅತ್ತಾವರದ ಜೆಪ್ಪುಪಟ್ಣದಲ್ಲಿ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್, ಕಾರ್ಪೋರೇಟರ್ ಶೈಲೇಶ್ ಶೆಟ್ಟಿ ಭೇಟಿ ನೀಡಿದರು. ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಜು.20ರಂದು ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್, ಜು.20ರಂದು ಬೆಳಗ್ಗೆಯಿಂದ 23ರಂದು ಬೆಳಗ್ಗೆವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆ ಅವಧಿಯಲ್ಲಿ ಜಿಲ್ಲೆಯ ಅಲ್ಲಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss