ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ರೇಖಾ ಗುಪ್ತಾ ಅವರು ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಇಂದು ಯಮುನಾ ನದಿಗೆ ಆರತಿ ಮಾಡುವ ಮೂಲಕ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಯಮುನಾ ನದಿ ತೀರದ ವಾಸುದೇವ್ ಘಾಟ್‌ನಲ್ಲಿ ಯರೇಖಾ ಗುಪ್ತಾ ಅವರು ದೀಪಗಳನ್ನು ಬೆಳಗುವ ಮೂಲಕ ಸ್ತೋತ್ರಗಳ ಪಠಣದೊಂದಿಗೆ ಆರತಿ ನೆರವೇರಿಸಿದರು.
ಇನ್ನು ಸಿಎಂ ರೇಖಾ ಗುಪ್ತಾ ಅವರಿಗೆ ಉಪ ಮುಖ್ಯಮಂತ್ರಿ ಪರ್ವೇಶ್ ವರ್ಮಾ, ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಹಾಗೂ ಸಂಪುಟ ಸಚಿವರಾದ ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರಜಿತ್, ಕಪಿಲ್ ಮಿಶ್ರಾ, ಪಂಕಜ್ ಕುಮಾರ್ ಸಿಂಗ್ ಸಾಥ್ ನೀಡಿದರು.
ಇನ್ನು ದೆಹಲಿಯ ಚುನಾವಣೆಯಲ್ಲಿ ಯಮುನಾ ನದಿಯ ಸ್ವಚ್ಛತೆಯು ಪ್ರಮುಖ ವಿಷಯವಾಗಿತ್ತು. ಆದರಂತೆ ಆಪ್ ಹಾಗೂ ಬಿಜೆಪಿ ನಡುವೆ ಈ ಕುರಿತು ಭಾರೀ ವಾಗ್ವಾದವು ನಡೆದಿತ್ತು. ಏತನ್ಮಧ್ಯೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಯಮುನಾ ನದಿಯನ್ನು ಸ್ವಚ್ಛ ಮಾಡಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಹ ಆದೇಶ ನೀಡಿದ್ದರು.
ಈ ವೇಳೆ ಮಾತನಾಡಿದ ಅವರು, “ವಿಕಸಿತ ದೆಹಲಿಯ ಧ್ಯೇಯಕ್ಕೆ ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ ಮತ್ತು ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಭರವಸೆ ವ್ಯಕ್ತಪಡಿಸಿದರು.
ಏತನ್ಮಧ್ಯೆ ನಾಲ್ಕು ಹಂತದ ತಂತ್ರವಾಗಿ ರೂಪಿಸಲಾಗಿರುವ ಯಮುನಾ ನದಿಯ ಶುದ್ಧೀಕರಣವು ಭಾನುವಾರದಿಂದ ಪ್ರಾರಂಭವಾಗಿದೆ.