ಬೆಂಗೇರಿ ಖಾದಿ ಕೇಂದ್ರದ ಸಾರ್ವಕಾಲಿಕ ದಾಖಲೆ! 85 ಸಾವಿರ ಧ್ವಜ ಮಾರಾಟ

ಹೊಸದಿಗಂತ ವರದಿ ಹುಬ್ಬಳ್ಳಿ:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇಡೀ ದೇಶಕ್ಕೆ ರಾಷ್ಟ್ರ ಧ್ವಜವನ್ನು ಪೂರೈಸುವ ಏಕೈಕ ಕೇಂದ್ರವಾದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಈ ವರ್ಷ 3.5 ಕೋಟಿ ರೂ. ವಹಿವಾಟು ಆಗಿದ್ದು, ಅಂದಾಜು 85 ಸಾವಿರಕ್ಕೂ ಹೆಚ್ಚು ಧ್ವಜಗಳ ಮಾರಾಟವಾಗಿದೆ.
ಪ್ರತಿ ವರ್ಷವು 2.50 ಕೋಟಿ ರೂ. ದಿಂದ 3 ಕೋಟಿ ರೂ. ವರೆಗೆ ವಹಿವಾಟು ನಡೆಯುತ್ತಿತ್ತು. ಸುಮಾರು 70 ಸಾವಿರಕ್ಕೂ ಧ್ವಜಗಳ ಮಾರಾಟವಾಗುತ್ತಿತ್ತು. ಈ ವರ್ಷ ಸ್ವಾತಂತ್ರೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದ್ದು, ವಹಿವಾಟಿನಲ್ಲಿ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರ ಧ್ವಜ ಸಂಹಿತೆ ತಿದ್ದುಪಡಿ ಜಾರಿಗೆ ತಂದಿದ್ದರಿಂದ ಖಾದಿ ಧ್ವಜ ತಯಾರಿಕಾ ಘಟಕ ಸಂಕಷ್ಟಕ್ಕೆ ತುತ್ತಾಗಲಿದೆ ಎನ್ನುವ ಆರೋಪದ ಮಧ್ಯೆ ಈ ವರ್ಷ ಈ ಕೇಂದ್ರ ದಾಖಲೆಯ ವಹಿವಾಟು ನಡೆಸಿದೆ. ಖಾದಿ ಧ್ವಜಗಳಿಗೂ ಈ ವರ್ಷ ಭಾರೀ ಬೇಡಿಕೆ ಬಂದಿದ್ದು, ಈ ಕೇಂದ್ರದಲ್ಲಿ ನೌಕರರು ಉತ್ಸಾಹದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ತಿರಂಗಾ ಅಭಿಯಾನದಿಂದ ಧ್ವಜ ಬೇಡಿಕೆ: ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗ್ ಅಭಿಯಾನ ಮಾಡುತ್ತಿರುವುದರಿಂದ ಧ್ವಜಗಳ ಬೇಡಿಕೆ ಹೆಚ್ಚಾಗಿದೆ ಎಂದು ಸ್ವತಃ ಖಾದಿ ಗ್ರಾಮೋದ್ಯೋಗ ಸಂಘದ ವ್ಯವಸ್ಥಾಪಕ ವಿಜಯಕುಮಾರ ಹೇಳುವ ಮಾತುಗಳಿವು. ಸರ್ಕಾರ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿದ್ದರಿಂದ ಖಾದಿ ಧ್ವಜ ಮಾರಾಟ ಕುಸಿತ ಕಾಣುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಖಾದಿ ಧ್ವಜವನ್ನೇ ಹಾರಿಸಬೇಕು ಎಂಬ ಅಭಿಲಾಷೆ ಹೊಂದಿರುವವರು ಇಲ್ಲಿ ಬಂದು ಹೆಚ್ಚೆಚ್ಚು ಧ್ವಜ ಖರೀದಿಸಿದ್ದಾರೆ ಎಂದರು.

ಇಲಾಖೆಗಳ ಮೇಲೆ ಖಾದಿ ಧ್ವಜ: ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಸರ್ಕಾರದ ಎಲ್ಲ ಇಲಾಖೆ ಹಾಗೂ ಕಚೇರಿಗಳ ಮೇಲೆ ಖಾದಿ ಧ್ವಜಗಳನ್ನೇ ಹಾರಿಸಲಾಗುತ್ತಿದೆ. ಬಹುತೇಕ ಸರ್ಕಾರಿ ಇಲಾಖೆಗಳು ಖಾದಿ ಧ್ವಜಗಳನ್ನೇ ಖರೀದಿಸಿದ್ದಾರೆ. ಈ ಕೇಂದ್ರದಲ್ಲಿ 8 ವಿವಿಧ ಅಳತೆಯ ಧ್ವಜಗಳ ತಯಾರಿಸಲಾಗುತ್ತದೆ ಎಂದರು.
ಕಳೆದ ಎರಡು ವರ್ಷ ಕೊರೋನಾದಿಂದ ಧ್ವಜದ ವಹಿವಾಟು ಬಹಳ ಕಡಿಮೆಯಾಗಿತ್ತು. ಕಳೆದ ಬಾರಿ ಮಾರಾಟವಾಗದೇ ಬಾಕಿ ಉಳಿದಿದ್ದ ಅಂದಾಜು 90 ಲಕ್ಷ ರೂ. ಮೌಲ್ಯದ ಧ್ವಜಗಳೂ ಸಹ ಮಾರಾಟವಾಗಿವೆ. ಒಬ್ಬ ಸಿಬ್ಬಂದಿ ದಿನಕ್ಕೆ 20 ಧ್ವಜಗಳನ್ನು ತಯಾರಿಸುತ್ತಾರೆ. ಒಟ್ಟು 14 ನೌಕರರು ಧ್ವಜ ತಯಾರಿಸುವ ಕಾರ್ಯದಲ್ಲಿ ತೊಡಗುತ್ತಿದ್ದು, ದಿನಕ್ಕೆ 250 ಕ್ಕೂ ಅಧಿಕ ಧ್ವಜ ತಯಾರಿಸುತ್ತಾರೆ. ಈಗ ಬೇಡಿಕೆ ಬಹಳ ಹೆಚ್ಚಾಗಿದ್ದರಿಂದ ಧ್ವಜ ತಯಾರಿಸುತ್ತಿದಂತೆ ಮಾರಾಟ ಮಾಡಲಾಗುತ್ತಿದೆ ಎಂದು ಧ್ವಜ ತಯಾರಿಕಾ ಘಟಕದ ವ್ಯವಸ್ಥಾಪಕಿ ಅನ್ನಪೂರ್ಣ ದೊಡ್ಡಮನಿ ತಿಳಿಸಿದರು.

ಸಾರ್ವಜನಿಕರಿಂದ ಖಾದಿ ಧ್ವಜ ಖರೀದಿ : ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಹುತೇಕ ಸಾರ್ವಜನಿಕರು ಖಾದಿ ಧ್ವಜಗಳನ್ನು ತಯಾರಿಸುತ್ತಿದ್ದಾರೆ. ಸಂಘ-ಸಂಸ್ಥೆ, ಎನ್ಜಿಓ ಹಾಗೂ ಫೌಂಡೇಶನ್ಗಳು ಅಭಿಯಾನದಲ್ಲಿ ತೊಡಗಲು ಉತ್ಸುಕರಾಗಿದ್ದು, ಖಾದಿ ಬಟ್ಟೆಯ ಧ್ವಜಗಳನ್ನು ಖರೀದಿಸುತ್ತಿದ್ದಾರೆ.
ಕಳೆದ ವರ್ಷ ಕೊರೋನಾದಿಂದ ಧ್ವಜ ಮಾರಾಟ ಬಹಳ ಕಡಿಮೆಯಾಗಿತ್ತು. ಈ ಬಾರಿ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!