ಅದಾನಿ ಸಮೂಹದ ವಿರುದ್ಧ ಆರೋಪ: ತಜ್ಞರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅದಾನಿ ಸಮೂಹದ (Adani Group) ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಸೂಚನೆ ನೀಡಿದೆ.

ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಈ ಸೂಚನೆ ನೀಡಿದೆ.

ಅದಾನಿ ಪ್ರಕರಣಕ್ಕೆ ಸಂಬಂಧಿಸಿ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನಾವು ಮಧ್ಯ ಪ್ರವೇಶಿಸುವುದು ಹಾಗಿರಲಿ. ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿದೆಯೇ? ನೀತಿ ನಿರೂಪಣೆ ವಿಷಯದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ. ಅದು ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಿದರು.

‘ಒಟ್ಟಾರೆ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಸರ್ಕಾರ ಈ ವಿಚಾರದಲ್ಲಿ ಆಸಕ್ತಿ ತಳೆದಿದೆಯೇ ಎಂಬುದರ ಪರಿಶೀಲನೆಗೆ ತಜ್ಞರ ತಂಡ ರೂಪಿಸುವಂತೆ ನಾವು ಸಲಹೆ ನೀಡುತ್ತಿದ್ದೇವೆ. ಮಾರುಕಟ್ಟೆ ನಿಯಂತ್ರಣ ಪ್ರಕ್ರಿಯೆ ಹಾಗೂ ಭಾರತದ ಹೂಡಿಕೆದಾರರು ಕಳೆದ ಎರಡು ವಾರಗಳಿಂದ ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ಖಾತರಿಪಡಸಿಕೊಳ್ಳುವಂತೆ ಸಾಲಿಸಿಟರ್ ಜನರಲ್ ಅವರಿಗೆ ನಾವು ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.

ಮಾರುಕಟ್ಟೆ ನಿಯಂತ್ರಕ ಸೆಬಿ ಎಲ್ಲವನ್ನೂ ನಿರ್ವಹಿಸುತ್ತಿದೆ. ನಾವು ಅವರ ಚೌಕಟ್ಟನ್ನು ಮೀರುವುದಿಲ್ಲ. ನಾವು ಮಾತುಕತೆ ನಡೆಸುತ್ತೇವಷ್ಟೇ ಎಂಬುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ ಎಂದು ಚಂದ್ರಚೂಡ್ ಹೇಳಿದರು.

ಅದಾನಿ ಸಮೂಹವು ಷೇರು ಮೌಲ್ಯ ತಿರುಚುವುದರ ಜತೆಗೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿತ್ತು ಎಂದು ಅಮೆರಿಕದ ಶಾರ್ಟ್​ ಸೆಲ್ಲರ್ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್​ ಎರಡು ವಾರಗಳ ಹಿಂದೆ ಆರೋಪಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!