ಸೋಲಾರ್ ಕೇಸ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಕಾಂಗ್ರೆಸ್ ಮುಖಂಡ ವೇಣುಗೋಪಾಲ್ ವಿಚಾರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಾಂಗ್ರೆಸ್ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ, ಕೇರಳದ ಕೆ.ಸಿ. ವೇಣುಗೋಪಾಲ್ ಅವರ ಮೇಲೆ ಇರುವ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಕುರಿತು ಸಿಬಿಐ ಬುಧವಾರ ವಿಚಾರಣೆಗೆ ಒಳಪಡಿಸಿದೆ.

ಸೋಲಾರ್ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕೆ.ಸಿ.ವೇಣುಗೋಪಾಲ್ ಅವರನ್ನು ಕಳೆದ ವಾರವಷ್ಟೇ ಸಿಬಿಐ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಮಹಿಳೆಗೆ ಲೈಂಗಿಕ ಶೋಷಣೆ ನೀಡಿದ ಆರೋಪ ಸಂಬಂಧ ವಿಚಾರಣೆ ನಡೆಸಿ ವೇಣುಗೋಪಾಲ್ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿದೆ.

2012 ರಲ್ಲಿ ಬೆಳಕಿಗೆ ಬಂದಿದ್ದ ಸೋಲಾರ್ ಎನರ್ಜಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ನಡುವೆ ಸೋಲಾರ್ ಹಗರಣ ಕೇರಳದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನು ಮನಗಂಡ ಪಿಣರಾಯಿ ವಿಜಯನ್ ಕಳೆದ ವರ್ಷ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

ಮಹಿಳೆ ಹೇಳಿಕೆ ಆಧರಿಸಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಉಮ್ಮಾನ್ ಚಾಂಡಿ, ಸಂಸದ ಹಿಬಿ ಇದನ್, ಮಾಜಿ ಸಚಿವ ಎ.ಪಿ. ಅನಿಲ್ ಕುಮಾರ್, ಸಂಸದ ಅಡೂರ್ ಪ್ರಕಾಶ್, ಬಿಜೆಪಿ ಮುಖಂಡ ಎ.ಪಿ. ಅಬ್ದುಲ್ ಕಟ್ಟಿ ಸೇರಿದಂತೆ ಆರು ಮಂದಿಯ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿತ್ತು. ಈ ಪ್ರಕರಣ ಸಂಬಂಧ ಕೆ.ಸಿ. ವೇಣುಗೋಪಾಲ್ ಅವರನ್ನು ವಾರದ ಹಿಂದಷ್ಟೆ ವಿಚಾರಣೆಗೆ ಒಳಪಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!