ಹೊಸದಿಗಂತ ವರದಿ, ಕೊಡಗು:
ಗೋಮಾಳದ ಜಾಗದ ರಕ್ಷಣೆಯ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಆರ್ಜಿ ಗ್ರಾಮದ ತರ್ಮೆಕಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟರು ಹಾಗೂ ನಿರಾಶ್ರಿತರೊಂದಿಗೆ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ವೈ.ಕೆ.ಗಣೇಶ್, ಜಿಲ್ಲಾಧಿಕಾರಿಗಳು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಜಿ ಗ್ರಾಮದ ತರ್ಮೆಕಾಡು ಪೈಸಾರಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ತೀರ್ಪನ್ನು ಜಿಲ್ಲಾಧಿಕಾರಿಗಳು ಸಾರ್ವಜನಿಕವಾಗಿ ಪ್ರಕಟಿಸದೇ ಇರುವುದರಿಂದ ಕೆಲವರು ಗೋಮಾಳದ ಹೆಸರನ್ನು ಬಳಸಿಕೊಂಡು ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಭೂರಹಿತರಿಗೆ ಹಂಚಲು ಇರುವ ಪೈಸಾರಿ ಜಮೀನನ್ನು ಭೂಮಾಲಕರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಪ್ರಭಾವಿಗಳು ಗೋಮಾಳದ ಜಾಗವೆಂದು ಜನರ ಹಾದಿ ತಪ್ಪಿಸಿ ದುರ್ಬಲರಿಗೆ ಆಶ್ರಯ ಸಿಗದಂತೆ ಮಾಡುತ್ತಿದ್ದಾರೆ ಎಂದು ದೂರಿದ ಗಣೇಶ್, ಆರ್ಜಿ ಗ್ರಾಮದಲ್ಲಿರುವ ಜಾನುವಾರುಗಳ ಗಣತಿ ಮಾಡಬೇಕು, ಗಣತಿ ಸಮಿತಿಯಲ್ಲಿ ಬುಡಕಟ್ಟು ನಿವಾಸಿಗಳು ಹಾಗೂ ಪರಿಶಿಷ್ಟ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು ಮತ್ತು ಜಾನುವಾರುಗಳ ಲೆಕ್ಕಕ್ಕೆ ಅನುಗುಣವಾಗಿ ಜಾಗದ ವ್ಯಾಪ್ತಿಯನ್ನು ಗುರುತಿಸಬೇಕೆಂದು ಒತ್ತಾಯಿಸಿದರು.
ತರ್ಮೆಕಾಡು ಪೈಸಾರಿಯಲ್ಲಿ ಗೋವುಗಳ ಸಂಖ್ಯೆಗನುಗುಣವಾಗಿ ಜಾಗವನ್ನು ಮೀಸಲಿಟ್ಟು ಉಳಿದ ಜಮೀನನ್ನು ಭೂರಹಿತ ನಿರ್ಗತಿಕ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಈಗಾಗಲೇ ವಾಸವಿರುವವರಿಗೆ ಹಕ್ಕುಪತ್ರ ವಿತರಿಸಬೇಕು, ಪ್ರಭಾವಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ ಸರ್ಕಾರ ವಶಕ್ಕೆ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತರ್ಮೆಕಾಡು ನಿವಾಸಿಗಳಾದ ಹೆಚ್.ಸಿ.ಗಣೇಶ್, ವೈ.ಆರ್.ಶಿವಪ್ಪ ಹಾಗೂ ಹೆಚ್.ಟಿ.ರಾಜೇಶ್ ಉಪಸ್ಥಿತರಿದ್ದರು