ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಅಭಿಯಾನ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಆದರೂ ದೇಶದಲ್ಲಿ ಕೇಂದ್ರ ಸರ್ಕಾರ ಹೊರದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿರುವುದನ್ನು ವಿರೋಧಿಸಿದ್ದ ಕೆಲ ವಿಪಕ್ಷ ನಾಯಕರು, ಭಾರತದಲ್ಲಿರುವ ಎಲ್ಲಾ ಪ್ರಜೆಗಳಿಗೆ ಲಸಿಕೆ ನೀಡುವ ಮುನ್ನವೇ ಬೇರೆ ದೇಶಗಳಿಗೆ ಲಸಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದವು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್, ಹೊರದೇಶಗಳಿಗೆ ನಾವು ಲಸಿಕೆ ಕಳುಹಿಸುತ್ತಿದ್ದರೂ ದೇಶದ ಜನರಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ವಿಚಾರದಲ್ಲಿ ಆರೋಗ್ಯಕರ ನಿರ್ಣಯ ತೆಗೆದುಕೊಂಡಿದ್ದು, ಯಾವುದೇ ಕಾರಣಕ್ಕೂ ಭಾರತದ ಪ್ರಜೆಗಳಿಗೆ ಕೊರೋನಾ ಲಸಿಕೆ ಪಡೆಯುವಲ್ಲಿ ತೊಂದರೆ ಆಗಲಾರದು ಎಂದು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಸುಮಾರು 5,94 ಕೋಟಿ ಡೋಸ್ ಲಸಿಕೆಯನ್ನು ವಿದೇಶಗಳಿಗೆ ಕಳುಹಿಸಲಾಗಿದೆ. ವಿಜ್ಞಾನ ಎಲ್ಲರಿಗೂ ಉಪಯುಕ್ತವಾಗಬೇಕು ಎನ್ನುವ ಉದ್ದೇಶ ನಮ್ಮದು. ಈಗಾಗಲೇ ನಮ್ಮ ದೇಶದಲ್ಲಿ ತ್ವರಿತಗತಿಯಲ್ಲಿ ಲಸಿಕೆ ವಿತರಣೆ ಆಗುತ್ತಿದೆ. ನಿನ್ನೆ ಒಂದೇ ದಿನ 30 ಲಕ್ಷದಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 3 ಕೋಟಿ ಡೋಸ್ ಕೊರೋನಾ ಲಸಿಕೆ ವಿತರಿಸಲಾಗಿದೆ. ಲಸಿಕೆ ಹೇಗೆ ಸ್ವೀಕರಿಸಬೇಕು, ಎಲ್ಲಿ ಸ್ವೀಕರಿಸಬೇಕು ಎಂಬಿತ್ಯಾದಿ ವಿವರಗಳನ್ನು ಈಗಾಗಲೇ ನೀಡಿದ್ದೇವೆ ಎಂದು ಹೇಳಿದ್ದಾರೆ.