ಹೊಸದಿಗಂತ ವರದಿ,ಕಲಬುರಗಿ:
ರಾಜ್ಯಾದ್ಯಂತ ಅತಿವೃಷ್ಟಿಯಿಂದ ಬೆಳೆಹನಿಯಾದ ರೈತರಿಗೆ ಪರಿಹಾರ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 969 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವತಿಯಿಂದ ರೈತರ ಹಿತ ಕಾಪಾಡಲು ಬೆಳೆಹಾನಿ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಒಣ ಬೇಸಾಯ ಬೆಳೆಹಾನಿಗೆ ಎನ್ ಡಿ ಆರ್ ಎಫ್ ನಿಧಿ ಅಡಿ ಒಂದು ಹೆಕ್ಟೇರ್ ಗೆ 6800 ರೂಪಾಯಿ ನೀಡಲು ನಿಗದಿ ಪಡಿಸಿತ್ತು. ಅದಕ್ಕೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹೆಚ್ಚುವರಿಯಾಗಿ 6800 ರೂಪಾಯಿ ಸೇರಿಸಿ ಒಂದು ಹೆಕ್ಟೇರ್ ಗೆ 13,600 ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ನೀರಾವರಿ ಪ್ರದೇಶದ ಒಂದು ಹೆಕ್ಟೇರಿಗೆ 11,500 ರೂಪಾಯಿ ನಿಗದಿ ಪಡಿಸಿತ್ತು. ಅದಕ್ಕೆ ರಾಜ್ಯ ಸರ್ಕಾರ 11,500 ಹೆಚ್ಚುವರಿ ಸೇರಿಸಿ ಒಂದು ಹೆಕ್ಟೇರಿಗೆ 25,000 ರೂಪಾಯಿ ನೀಡಲು ಮುಂದಾಗಿದೆ. ತೋಟಗಾರಿಕೆ ಬೆಳೆಗಳಿಗೆ 18000 ರೂಪಾಯಿ ನಿಗದಿ ಮಾಡಲಾಗಿತ್ತು. ರಾಜ್ಯಸರ್ಕಾರ ಹೆಚ್ಚುವರಿ 10000 ರೂಪಾಯಿ ಸೇರಿಸಿ ಒಂದು ಹೆಕ್ಟೇರ್ ಗೆ 28,000ಸಾವಿರ ರೂಪಾಯಿ ನೀಡಲು ತೀರ್ಮಾನಿಸಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಬಂದಾಗ ರೈತರ ಮಕ್ಕಳಿಗೆ ಪ್ರೋತ್ಸಾಹಿಸಲು, ಹೆಚ್ಚಿನ ಶಿಕ್ಷಣ ಪಡೆಯಲು ಶಿಷ್ಯವೇತನ ನೀಡುವುದಾಗಿ ಘೋಷಿಸಿದೆ. ರೈತರ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಕಟ್ಟಿಬದ್ದವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಘಟಕ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ ನಾಲವರ, ಮಧ್ಯಮ ಪ್ರಮುಖ ಅರುಣ ಕುಲಕರ್ಣಿ ಇದ್ದರು