ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………
ಹೊಸ ದಿಗಂತ ವರದಿ, ಬಾಗಲಕೋಟೆ :
ಕೋವಿಡ್ ಎರಡನೇ ಅಲೆಯಿಂದ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ನಿರಾಣಿ ಪೌಂಡೇಶನ್ ವತಿಯಿಂದ ಜಿಲ್ಲಾಡಳಿತಕ್ಕೆ 2 ಆ್ಯಂಬುಲೆನ್ಸ್ ಸೇರಿ 4 ಇತರೆ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರ ಮೂಲಕ ರವಿವಾರ ಹಸ್ತಾಂತರಿಸಲಾಯಿತು.
ಬೀಳಗಿ ತಾಲೂಕಾ ಪಂಚಾಯತ ಆವರಣದಲ್ಲಿ ನಿರಾಣಿ ಫೌಂಡೇಶನದಿಂದ ನೀಡಲಾದ ಅಂಬುಲೆನ್ಸ್ ಹಾಗೂ ಇತರೆ ವಾಹನಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಕೊಂಡು ಮಾತನಾಡಿದ ಅವರು ಕೋವಿಡ್ ಸಂಕಷ್ಟದಲ್ಲಿ ಸೊಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಅಂಬುಲೆನ್ಸ್ ಜೊತೆಗೆ ಬೀಳಗಿ ತಾಲೂಕಾ ಕೋವಿಡ್ ಕೇರ್ ಸೆಂಟರ್ಗಳಿಗೆ 500 ಡಿಸ್ಪೋಜಲ್ ಬೆಡ್, ಸ್ಯಾನಿಟೈಜರ್ ನೀಡಿದ್ದಾರೆ. ರೋಗಿಗಳಿಗೆ ಆಕ್ಸಿಜನ್ ಮುಖ್ಯವಾಗಿರುವುದನ್ನು ಮನಗಂಡು ಕೋವಿಡ್ ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲು ಸಹ ನಿರಾಣಿ ಫೌಂಡೇಶನ್ ಮುಂದಾಗಿರುವುದನ್ನು ಕಂಡು ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ಮಾತನಾಡಿ ಕೋವಿಡ್ ಎರಡನೇ ಅಲೆಯಿಂದ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಲು ಎಂ.ಆರ್.ಎನ್(ನಿರಾಣಿ) ಫೌಂಡೇಶನ್ ತಾಲೂಕಾ ಆಡಳಿತದೊಂದಿಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದರು.
ಉಚಿತ ಆಕ್ಸಿಜನ್ ಪೂರೈಕೆ, ತಜ್ಞವೈದ್ಯರಿಂದ ಕನ್ಸಲ್ಟೆನ್ಸಿ, ಉಚಿತ ಟ್ಯಾಕ್ಸಿ ಹಾಗೂ ಅಂಬುಲೆನ್ಸ್ ಸೇವೆ, ದಿನ 24 ಗಂಟೆಗಳ ಕಾಲ ಸಹಾಯವಾಣಿ ಕೇಂದ್ರ ಸ್ಥಾಪನೆ, ಸೋಂಕಿತರಿಎ ಉಚಿತ ಊಟದ ವ್ಯವಸ್ಥೆ, 100 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್, ಕೋವಿಡ್ ಚಿಕಿತ್ಸೆ, ಸ್ಯಾನಿಟೈಜರ್ ವಿತರಣೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಇರಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಸೌಲಭ್ಯಗಳ ಹಸ್ತಾಂತರ ಕಾರ್ಯಕ್ರಮದ ಪೂರ್ವದಲ್ಲಿ ಬೀಳಗಿ ತಾಲೂಕಿನಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್ಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.