ಅಮೆರಿಕದ ಪೆಲೊಸಿ ತೈವಾನಿಗೆ ಭೇಟಿ ಇತ್ತರೆ ಚೀನಾವೇಕೆ ಕೋಪಗೊಂಡಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ತೈವಾನಿಗೆ ಅಮೆರಿಕದ ಹೌಸ್‌ ಸ್ಪೀಕರ್‌ ನಾನ್ಸಿ ಪೆಲೋಸಿ ಭೇಟಿಯಿತ್ತಿರುವುದು ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರೋ ವಿಷಯ. ಬೆಂಕಿಯ ಜೊತೆ ಸರಸವಾಡಬೇಡಿ ಎಂದು ಪರೋಕ್ಷವಾಗಿ ತನ್ನ ದ್ವೇಷ ಕಟ್ಟಿಕೊಳ್ಳಬೇಡಿ ಎನ್ನುತ್ತ ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಗುಟುರು ಹಾಕಿದರೂ ಕ್ಯಾರೇ ಎನ್ನದ ನಾನ್ಸಿ ಚೀನಾ ತನ್ನದೆಂದು ಹೇಳಿಕೊಳ್ಳುವ ತೈವಾನಿಗೆ ಕಾಲಿಟ್ಟು, ಸಮಾಲೋಚನೆಗಳನ್ನು ನಡೆಸಿ ಹಿಂತಿರುಗಿದ್ದಾರೆ. ಚೀನಾದ ಬೆದರಿಕೆಯಿದೆಯೆಂಬುದು ತಿಳಿದಿರುವ ತೈವಾನ್‌ ತನ್ನ ಸೇನೆಗೆ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಸೂಚನೆ ನೀಡಿದೆ. ಡ್ರ್ಯಾಗನ್‌ ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ತೈವಾನಿನ ಆಕಾಶದಲ್ಲಿ ತನ್ನ ಯುದ್ಧ ವಿಮಾನಗಳನ್ನು ನುಗ್ಗಿಸಿದೆ. ಇತ್ತ ಅಮೆರಿಕದ ಯುದ್ಧ ನೌಕೆಗಳೂ ಸಹ ದಾಳಿಯಿಡಲು ತಯಾರಾಗಿರುವಂತೆ ಸಜ್ಜಾಗಿ ನಿಂತಿವೆ. ಅಮರಿಕದ ಚುನಾಯಿತ ನಾಯಕಿಯೊಬ್ಬಳು ತೈವಾನಿಗೆ ಕಾಲಿಟ್ಟಿದ್ದು ಇಷ್ಟೊಂದು ಬದಲಾವಣೆಗಳನ್ನು ಸೃಷ್ಟಿಸಿರೋ ಹೊತ್ತಲ್ಲಿ ಈ ಭೇಟಿಯ ಕುರಿತು ನೀವು ತಿಳಿದುಕೊಳ್ಳಬೇಕಿರೋ ಕೆಲ ಆಸಕ್ತಿಕರ ಅಂಶಗಳು ಇಲ್ಲಿವೆ.

ಚೀನಾ ಕೋಪಗೊಂಡಿರುವುದೇಕೆ?
ತೈವಾನ್‌ ಅನ್ನು ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಭೇಟಿ ನೀಡುವುದು ತೈವಾನ್‌ ಸ್ವಾತಂತ್ರ್ಯಕ್ಕೆ ಅಮೆರಿಕ ಬೆಂಬಲನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇದು ಚೀನಾದ ಪಾಲಿಗೆ ಅರಗಿಸಿಕೊಳ್ಳಲಾಗದ್ದು. ಅದೂ ಅಲ್ಲದೇ ಈಗೊಂದು ವಾರದ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಚೀನಾದ ಅಧ್ಯಕ್ಷ ಕ್ಸೀ ಜಿನ್‌ ಪಿಂಗ್‌ ʼಬೆಂಕಿಯೊಂದಿಗೆ ಆಟವಾಡಬೇಡಿʼ (ಚೀನಾವನ್ನು ಕೆಣಕಬೇಡಿ) ಎಂದು ಎಚ್ಚರಿಸಿದ್ದರು. ಆದರೆ ಇದರ ಹೊರತಾಗಿಯೂ ಪೆಲೋಸಿ ಆಗಮಿಸಿರುವುದು ಚೀನಾದ ಕೆಂಗಣ್ಣಿಗೆ ಇನ್ನೊಂದು ಕಾರಣವಾಗಿದೆ.

ಚೀನಾದ ಪ್ರತಿಕ್ರಿಯೆ ಏನು ?
ಪೆಲೋಸಿಯ ಆಗಮನದ ಕುರಿತಾಗಿ ಚೀನಾ ಖಾರವಾಗಿ ಪ್ರತಿಕ್ರಿಯಿಸಿದೆ. “ಈ ಭೇಟಿಯು ಚೀನಾ-ಯುಎಸ್ ಸಂಬಂಧಗಳ ರಾಜಕೀಯ ಅಡಿಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಖಂಡಿತವಾಗಿ ತೆಗೆದುಕೊಳ್ಳುತ್ತದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಇದಲ್ಲದೇ ಮುಂದಿನ ಪರಿಸ್ಥಿತಿಗಳನ್ನು ಎದುರಿಸಲು ಚೀನಾದ ಮಿಲಿಟರಿ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಕೆಲವರದಿಗಳು ಉಲ್ಲೇಖಿಸಿವೆ.

ಅಮೇರಿಕದ ನಿಲುವೇನು?
ಅಮರಿಕವು 1970 ರಿಂದಲೂ ʼಒಂದು ಚೀನಾʼ ನೀತಿಗೆ ಬದ್ಧವಾಗಿದೆ, ಇದರಡಿಯಲ್ಲಿ ತೈವಾನ್‌ ಚೀನಾದ ಭಾಗವೆಂದು ಅದು ಗುರುತಿಸುತ್ತದೆ. ಆದರೆ ತೈವಾನ್‌ ಜೊತೆಗೂ ಅನಧಿಕೃತ ಸಂಬಂಧವನ್ನು ಅಮೆರಿಕ ಹೊಂದಿದೆ. ಈ ಭೇಟಿಯ ಕುರಿತಾಗಿ ಮೊದಲಿಗೆ ಜೋ ಬಿಡೆನ್‌ ಕಾಳಜಿ ವ್ಯಕ್ತಪಡಿಸಿದರೂ ಅವರ ಆಡಳಿತ ಪಕ್ಷವು ಅದನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಅಲ್ಲದೇ ತೈವಾನ್‌ ಗೆ ತೆರಳುವುದು ಬಿಡುವುದು ಪೆಲೋಸಿಗೆ ಬಿಟ್ಟ ಆಯ್ಕೆ ಎಂದು ಈ ಹಿಂದೆ ಅಮೆರಿಕ ಹೇಳಿದೆ. ಇದರ ನಡುವೆ ಸೋಮವಾರ, ಅಮೇರಿಕನ್ ಮಿಲಿಟರಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಚಲನವಲನಗಳನ್ನು ಹೆಚ್ಚಿಸಿದೆ ಮತ್ತು ವಿಮಾನವಾಹಕ ನೌಕೆ USS ರೊನಾಲ್ಡ್ ರೇಗನ್ ನ ಆಕ್ರಮಣ ತಂಡ ಫಿಲಿಪೀನ್‌ ಸಮುದ್ರದಲ್ಲಿದೆ ಎಂದು ವರದಿಗಳು ಹೇಳಿವೆ.

ತೈವಾನ್‌ ಏನು ಹೇಳುತ್ತದೆ ?
ಯುಎಸ್-ತೈವಾನ್ ಸ್ನೇಹ ಶಾಶ್ವತವಾದದ್ದು ಎಂಬ ಸ್ವಾಗತ ಸಂದೇಶವನ್ನು ಪೆಲೋಸಿಯವರಿಗೆ ತೈವಾನ್‌ ನೀಡಿದೆ. ತೈವಾನ್‌ನ ಸಾರ್ವಭೌಮತ್ವವನ್ನು ಬಲಪಡಿಸಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ತೈವಾನ್‌ನ ಅಧ್ಯಕ್ಷ ತ್ಸೈ ಇಂಗ್-ವೆನ್ನ ಹೇಳಿದ್ದಾರೆ. “ಸ್ಪೀಕರ್ ಪೆಲೋಸಿ ದೀರ್ಘಕಾಲದವರೆಗೆ ತೈವಾನ್ ಅನ್ನು ಬೆಂಬಲಿಸಿದ್ದಾರೆ, ತೈವಾನ್‌ನ ಪ್ರಜಾಪ್ರಭುತ್ವ ಅಭಿವೃದ್ಧಿ ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಗಮನ ನೀಡಿದ್ದಾರೆ” ಎಂದು ತೈವಾನ್‌ ನ ವಿದೇಶಾಂಗ ಸಚಿವಾಲಯ ಹೇಳಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!