ಇಟಲಿ ಕನ್ನಡಕ ತೆಗೆದು ಮೋದಿ ಸರ್ಕಾರದ ಅಭಿವೃದ್ಧಿ ನೋಡಿ: ರಾಗಾಗೆ ಅಮಿತ್‌ ಶಾ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಎರಡು ದಿನಗಳ ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಅಮಿತ್‌ ಶಾ “ಇಟಲಿ ಕನ್ನಡಕವನ್ನು ತೆಗೆದು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ್ನು ನೋಡಿ” ಎಂದು ಸಲಹೆ ನೀಡಿದ್ದಾರೆ.

ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯಲ್ಲಿ 1,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿ ಮಾತನಾಡಿದ ಕೆಂದ್ರ ಗೃಹ ಸಚಿವ ಅಮಿತ್ ಶಾ “ಎಂಟು ವರ್ಷಗಳಲ್ಲಿ ಏನಾಯಿತು ಎಂದು ಕಾಂಗ್ರೆಸ್ ನಾಯಕರು ಕೇಳುತ್ತಾರೆ, ಅವರು ಎಚ್ಚರವಾಗಿದ್ದರೂ ಕಣ್ಣು ಮುಚ್ಚಿಕೊಂಡಿರುವ ಹಾಗಿದೆ. ರಾಹುಲ್ ಬಾಬಾ ತಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಪೆಮಾ ಖಂಡು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಬೇಕು.ಕಳೆದ ಎಂಟು ವರ್ಷಗಳಲ್ಲಿ ಅರುಣಾಚಲದಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಕಳೆದ 50 ವರ್ಷಗಳಲ್ಲಿ ಸಾಧಿಸಲಾಗದ ಕೆಲಸವನ್ನು ಪೆಮಾ ಖಂಡು ಮತ್ತು ನರೇಂದ್ರ ಮೋದಿ ಎಂಟು ವರ್ಷಗಳಲ್ಲಿ ಮಾಡಿದೆ” ಎಂದಿದ್ಧಾರೆ.

ಎರಡು ದಿನಗಳ ಅರುಣಾಚಲ ಪ್ರದೇಶದ ಪ್ರವಾಸದಲ್ಲಿರುವ ಅವರು ಇಂದು ನಾಮ್ಸಾಯಿ ಜಿಲ್ಲೆಯ ಗೋಲ್ಡನ್ ಪಗೋಡಕ್ಕೆ ಭೇಟಿ ನೀಡಿದರು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ರಾಜ್ಯದ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಅವರೊಂದಿಗೆ ಉಪಸ್ಥಿತರಿದ್ದರು. ಪ್ರವಾಸದ ಮುಂದಿನ ಭಾಗವಾಗಿ ಗಡಿ ಪ್ರದೇಶದ ಭದ್ರತೆ ಮತ್ತು ಅಭಿವೃದ್ಧಿಗಳನ್ನು ಶಾ ಪರಿಶೀಲಿಸಲಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್ (SSB), ಅಸ್ಸಾಂ ರೈಫಲ್ಸ್, ಬಾರ್ಡರ್ ರೋಡ್ ಆರ್ಗನೈಸೇಶನ್, ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDLC) ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಹಾಗೂ ಎಲ್ಲಾ ಶ್ರೇಣಿಯ ಸೇನಾ ಸಿಬ್ಬಂದಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಪಡೆಗಳೊಂದಿಗೆ ಒಟ್ಟಾಗಿ ಬಡಾ ಖಾನಾ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!