Wednesday, August 10, 2022

Latest Posts

ದೇಶದ 130 ಕೋಟಿ ಜನರ ಸಹಕಾರದಿಂದ ಕೊರೋನಾ ವಿರುದ್ಧ ಸಮರ್ಥವಾಗಿ ಹೋರಾಟ: ಅಮಿತ್ ಶಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ವರದಿ,ದಾವಣಗೆರೆ:

ದೇಶವಾಸಿಗಳ ಸಹಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದರು.
ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಾಲೇಜು ಗ್ರಂಥಾಲಯ, ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದೊಂದು ವರ್ಷದಿಂದ ಕೊರೋನಾ ಮಹಾಮಾರಿಯು ಇಡೀ ಮನುಕುಲಕ್ಕೆ ಆತಂಕ ತಂದೊಡ್ಡಿದೆ. ಆದರೆ ಜಗತ್ತಿನಲ್ಲಿ ಅತ್ಯಂತ ಸಮರ್ಥ ರೀತಿಯಲ್ಲಿ ಕೊರೋನಾ ತಡೆಗಟ್ಟುವ ಕೆಲಸ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದೆ. ಈ ಹೋರಾಟಕ್ಕೆ ದೇಶದ 130 ಕೋಟಿ ಜನರು ನೀಡಿದ ಸಹಕಾರ ಮರೆಯುವಂತಿಲ್ಲ ಎಂದರು.
ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಕೊರೋನಾ ವಾರಿಯರ್೯ಗಳಾದ ವೈದ್ಯರು,ಪೌರ ಕಾರ್ಮಿಕರು ತಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದರಿಂದ ನಾವು ಯಶಸ್ವಿಯಾದೆವು. ಈ ಹೋರಾಟದಲ್ಲಿ ಅನೇಕರನ್ನು ನಾವು ಕಳೆದುಕೊಳ್ಳಬೇಕಾಯಿತು. ಆದರೆ ಒಂದು ಸರ್ಕಾರವಾಗಿ ನಾವು ಸಾಧ್ಯವಾದ ಎಲ್ಲ ಪ್ರಯತ್ನ ಮಾಡಿ ಜನರ ಜೀವ ಕಾಪಾಡಿದ್ದೇವೆ ಎಂದು ಅವರು ನುಡಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ವಿಶೇಷವಾಗಿ ಬಡವರಿಗೆ ತುಂಬಾ ಸಮಸ್ಯೆಯಾಗಿದೆ. ದಿನನಿತ್ಯ ದುಡಿದು ಬದುಕೊ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು ಸುಳ್ಳಲ್ಲ. ಸದಾ ಬಡವರು, ಶೋಷಿತರು, ದಲಿತರು ಮತ್ತು ಆದಿವಾಸಿಗಳ ಹಿತಚಿಂತನೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ವಹಿಸಿಲ್ಲ. ದೇಶದ 80 ಕೋಟಿ ಜನರಿಗೆ 10 ತಿಂಗಳ ಕಾಲ ಉಚಿತ ಪಡಿತರ ವಿತರಿಸುವ ದಿಟ್ಟ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಮೂಲಕ ಯಾರೊಬ್ಬರೂ ಕೊರೋನಾ ಕಾಲದಲ್ಲಿ ಅನ್ನಕ್ಕಾಗಿ ಕಷ್ಟಪಡದಂತೆ ಗಮನ ಹರಿಸಿದೆ ಎಂದು ಅವರು ವಿವರಿಸಿದರು.
ಕೊರೋನಾ ಪರಿಸ್ಥಿತಿ ನಿಭಾಯಿಸಲು ನರೇಂದ್ರ ಮೋದಿ ಸರ್ಕಾರ ಸಾವಿರಾರು ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಪ್ರತಿ ರಾಜ್ಯ, ಜಿಲ್ಲೆಗೆ ಇದರ ಲಾಭ ತಲುಪಲಿದೆ. ಕೋವಿಡ್ 2ನೇ ಅಲೆಯಲ್ಲಿ ಕೊಂಚ ಆಕ್ಸಿಜನ್ ಸಮಸ್ಯೆಯಾಗಿದ್ದರೂ, ತದನಂತರ ಸಮರೋಪಾದಿಯಲ್ಲಿ ಆಕ್ಸಿಜನ್ಘ ಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಭವಿಷ್ಯದಲ್ಲಿ ಯಾವುದೇ ಮಹಾಮಾರಿ ಬಂದರೂ ಆಕ್ಸಿಜನ್ ಸಮಸ್ಯೆಯಾಗದಂತೆ ಎದುರಿಸುವ ಶಕ್ತಿ ಭಾರತಕ್ಕೆ ಬಂದಿದೆ ಎಂದು ಅವರು
ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ಎರಡು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದ್ದಾರೆ. ವಿಶೇಷವಾಗಿ ರೈತರು ಹಾಗೂ ಬಡಜನರಿಗಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಬಸವರಾಜ ಬೋಮ್ಮಾಯಿ ನೇತೃತ್ವದ ಸರ್ಕಾರ ಕೂಡ ಅತ್ಯುತ್ತಮ ಕೆಲಸ ಮಾಡಲಿದೆ. ಬೊಮ್ಮಾಯಿಯವರ ಸಾರ್ವಜನಿಕ, ರಾಜಕೀಯ ಅನುಭವದಿಂದ ರಾಜ್ಯದಲ್ಲಿ ಉತ್ತಮ ಕೆಲಸಗಳಾಗಲಿವೆ. ಇದರಿಂದ ರಾಜ್ಯದ ಸಮಗ್ರ ವಿಕಾಸದ ಮೂಲಕ ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದ್ದು, ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಅರಗ ಜ್ಞಾನೇಂದ್ರ, ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಬಿ.ಎ.ಬಸವರಾಜ ಭೈರತಿ, ಸಂಸದ
ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss