ಕರ್ನಾಟಕದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅಮಿತ್‌ಶಾ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ರಾಜ್ಯದಲ್ಲಿ ಹಲವು ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡಿದರು. ವಿಶ್ವಮಾನವ ಬಸವಣ್ಣನವರ ಜಯಂತಿಯ ಶುಭ ಸಂದರ್ಭದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಸಮಾಜಕ್ಕೆ ಬಸವಣ್ಣನವರ ಕೊಡುಗೆಗಳನ್ನು ಸ್ಮರಿಸಿದರು.

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿಯಲ್ಲಿ ನಿರ್ಮಾಣವಾಗಿರುವ ʼನೃಪತುಂಗ ವಿಶ್ವ ವಿದ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು. ಹಾಗೂ ವರ್ಚುವಲ್‌ ಮೂಲಕ ಬಳ್ಳಾರಿಯ ವಿಧಿವಿಜ್ಞಾನ ಪ್ರಯೋಗಾಲವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಪೋಲೀಸ್‌ ಇಲಾಖೆಯ ʼಇ-ಬೀಟ್‌ʼ ಅಪ್ಲಿಕೆಷನ್‌ ಅನ್ನು ಲೋಕಾರ್ಪಣೆ ಗೊಳಿಸಿದರು.

ನೃಪತುಂಗ ವಿಶ್ವ ವಿದ್ಯಾಲಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು “ದೇಶನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಬಹುಮುಖ್ಯವಾದದ್ದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶವನ್ನು ಉನ್ನತಿಗೇರಿಸುವ ಸಂಕಲ್ಪವನ್ನು ಮಾಡಬೇಕಿದೆ. ದೇಶಕ್ಕಾಗಿ ಬಲಿದಾನ ಮಾಡಿರುವ ಹಲವರ ಕೊಡುಗೆಗಳನ್ನು ಅರಿತು ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ಜಗತ್ತಿನಲ್ಲೇ ಭಾರತವನ್ನು ಸರ್ವೋಚ್ಛ ಸ್ಥಾನಕ್ಕೇರಿಸುವ ತನ್ಮೂಲಕ ಭಾರತವನ್ನು ವಿಶ್ವಗುರುವಾಗಿಸಲು ಈಗಿನಿಂದಲೇ ತೊಡಗಿಕೊಳ್ಳಬೇಕಿದೆ.” ಎಂದು ಹೇಳಿದರು.

“ಉನ್ನತ ಶಿಕ್ಷಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ದೇಶದ ಯುವಕರಿಗೆ ಉತ್ತಮ ಶಿಕ್ಷಣ, ವಿಫುಲ ಅವಕಾಶಗಳು ಸಿಗಬೇಕು ಎಂಬ ಸದುದ್ದೇಶದಿಂದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಮೋದಿ ಸರ್ಕಾರ ಬಂದ ನಂತರ 6 ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳ ನಿರ್ಮಾಣವಾಗಿದೆ. ಇದರ ಜೊತೆಗೆ 7 ಐಐಎಂ, 7 ಐಐಟಿ, 15 ಏಮ್ಸ್‌, 209 ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ 320 ನೂತನ ವಿಶ್ವ ವಿದ್ಯಾಲಯಗಳನ್ನು ತೆರೆಯಲಾಗಿದೆ ಹಾಗೂ 5,709 ಕಾಲೇಜುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಿಗೆಂದೇ 400 ಕ್ಕೂ ಹೆಚ್ಚು ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ನಿರ್ಮಿಸಲಾಗಿದೆ”

“ಅಭಿವೃದ್ಧಿಯಿಂದ ಹಿಂದುಳಿದಿದ್ದ ಈಶಾನ್ಯ ಭಾಗದಲ್ಲೂ ಕೂಡ 21 ವಿವಿಗಳ ನಿರ್ಮಾಣವಾಗುತ್ತಿದೆ. ಅಲ್ಲದೇ ಲಡಾಕ್‌ ನಲ್ಲಿ ದೇಶದ ಮೊದಲ ಸಿಂಧು ಸೆಂಟ್ರಲ್‌ ಯುನಿವರ್ಸಿಟಿ ತೆಗೆಯಲಾಗಿದೆ. ಯುವಕರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗಲು ಹಲವು ಅಭಿವೃದ್ಧಿಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲೂ ಕೂಡ ಉನ್ನತ ಶಿಕ್ಷಣಕ್ಕಾಗಿ ಮುಂದಿನ ತಲೆಮಾರಿನ ಮೂಲಸೌಕರ್ಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!