MUST READ | ಹುದುಗೂರು-ಯಡವನಾಡು ವ್ಯಾಪ್ತಿಯಲ್ಲಿ ಪುರಾತನ ದೇಗುಲ ಪತ್ತೆ

ಹೊಸದಿಗಂತ ವರದಿ ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಮತ್ತು ಯಡವನಾಡು ಗ್ರಾಮದಲ್ಲಿ ಪುರಾತನ ಶಿಲೆಗಳು, ಶಿಲಾಶಾಸನ, ಶಿಲಾ ಸಮಾಧಿಗಳು, ಆರು ನಿಲುಗಲ್ಲುಗಳು ಸೇರಿದಂತೆ ಪುರಾತನ ಕಲ್ಲಿನ ಚಪ್ಪಡಿಯಲ್ಲಿ ನಿರ್ಮಿಸಿದ ದೇವಾಲಯ ಪತ್ತೆಯಾಗಿವೆ.

ಹುದುಗೂರು, ಯಡವನಾಡು ಭಾಗದಲ್ಲಿ ಜಿಲ್ಲಾ ಪುರಾತತ್ವ ಇಲಾಖೆಯು ಪ್ರಾಚೀನ ಅವಶೇಷಗಳ ಮಾಹಿತಿ ಸಂಗ್ರಹದ ಮತ್ತು ಸರ್ವೆ ಕಾರ್ಯವನ್ನು ಆರಂಭ ಮಾಡಿದೆ. ಹುದುಗೂರು ಗ್ರಾಮದ ಇಂದ್ರಾವತಿ ರೈ ಅವರ ಜಮೀನಿನಲ್ಲಿ ಒಂದು ಶಿಲಾ ಶಾಸನ, ಒಂದು ಸತಿಗಲ್ಲು, ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಒಂದು ಸತಿಗಲ್ಲು, ಸಮೀಪದ ಗಂಧದ ಹಾಡಿಯ ಅರಣ್ಯ ಪ್ರದೇಶದ ಮಧ್ಯದಲ್ಲಿ ಹಾಗೂ ಯಡವನಾಡು ನಿಂಗಮ್ಮ ಅವರ ಜಮೀನಿನಲ್ಲಿ ಮೂರು ಶಿಲಾ ಸಮಾಧಿಗಳು ಪತ್ತೆಯಾಗಿದ್ದು, ಇವುಗಳು ಕ್ರಿಸ್ತ ಪೂರ್ವಕ್ಕೆ ಸೇರಿದ್ದವುಗಳು ಎಂದು ಅಂದಾಜು ಮಾಡಲಾಗಿದೆ.


ಯಡವನಾಡು ಪೂರ್ವ ಗಸ್ತು ಮೀಸಲು ಅರಣ್ಯದಲ್ಲಿ ಒಂದೇ ಸ್ಥಳದಲ್ಲಿ 6 ನಿಲುಗಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಹಾರಂಗಿ ಹಿನ್ನೀರಿನಲ್ಲಿ ಪುರಾತನ ಕಲ್ಲಿನ ಚಪ್ಪಡಿಯಲ್ಲಿ ನಿರ್ಮಿಸಿದ ದೇವಾಲಯವನ್ನು ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ.

ಪುರಾತತ್ವ ಇಲಾಖೆಯವರು ಗ್ರಾಮ ಪಂಚಾಯತಿಗಳಿಗೆ ತಿಳಿಸಿದ ಮೇರೆಗೆ ಮಾಹಿತಿ ಪಡೆದುಕೊಂಡ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಸ್.ರವಿ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ ನಂತರ ಅಧಿಕಾರಿಗಳ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಸ್ಥರನ್ನೊಳಗೊಂಡಂತೆ ಶಿಲಾಶಾಸನಗಳು ಇದ್ದ ಸ್ಧಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಪುರಾತನ ವಸ್ತುಗಳು ಪತ್ತೆಯಾಗಿರುವ ಜಾಗದಲ್ಲಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಮಾಹಿತಿಯನ್ನು ತಿಳಿಸುವ ಉದ್ದೇಶವನ್ನು ಇಲಾಖೆಯು ಹೊಂದಿದೆ.

ಮಡಿಕೇರಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿ ರೇಖಾ, ಸಹಾಯಕ ಅಧಿಕಾರಿ ತಮ್ಮಯ್ಯ ಮತ್ತು ತಂಡ, ಹುದುಗೂರು ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಸ್.ರವಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!