ಅದು ಆನೆಗಳ ಶಿಬಿರ. ಸುಮಾರು ನೂರಾರು ಆನೆಗಳು ಶಿಬಿರದಲ್ಲಿ ಪಾಲ್ಗೊಂಡಿದ್ದವು. ಅಲ್ಲಿರುವ ಯಾವ ಆನೆಯನ್ನೂ ಪಂಜರದಲ್ಲೋ ಅಥವಾ ದೊಡ್ಡ ದೊಡ್ಡ ಕಬ್ಬಿಣದ ಸರಪಳಿಗಳಿಂದ ಕಟ್ಟಿರಲಿಲ್ಲ. ಸಣ್ಣ ಹಗ್ಗದಿಂದ ಕಟ್ಟಿದ್ದರು.
ಶಿಬಿರ ನೋಡಲು ಬಂದ ವ್ಯಕ್ತಿಗೆ ಬಹಳ ಕುತೂಹಲವಾಯಿತು. “ಅರೇ ಈ ಬಲಶಾಲಿ ಆನೆಗಳಿಗೆ ಇದೊಂದು ಸಣ್ಣ ಹಗ್ಗ ಹರಿದುಕೊಳ್ಳಲಾಗುವುದಿಲ್ಲವೇ? ಯಾಕೆ ಆನೆಗಳು ಆ ಪ್ರಯತ್ನ ಮಾಡುತ್ತಿಲ್ಲ” ಎಂದು. ಕುತೂಹಲ ತಡೆಯಲಾಗದೇ ಅಲ್ಲೆ ಹತ್ತಿರದಲ್ಲಿದ್ದ ತರಬೇತಿದಾರರೊಬ್ಬರನ್ನ ಈ ಬಗ್ಗೆ ಕೇಳಿದ.
“ಆನೆಗಳು ಬಹಳ ಚಿಕ್ಕವರಿದ್ದಾಗಿಂದಲೂ ಇದೇ ಸಣ್ಣ ಹಗ್ಗದಿಂದಲೇ ಅವರನ್ನು ಕಟ್ಟುತ್ತಿದ್ದೆವು. ಆಗ ಅವಕ್ಕೆ ಈ ಹಗ್ಗದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಕಟ್ಟಿರುವ ಹಗ್ಗದಿಂದ ಬಿಡಿಸಿಕೊಳ್ಳಲಾಗಲಿಲ್ಲ. ಆಮೇಲೆ ಅವು ತಮ್ಮ ಪ್ರಯತ್ನವನ್ನು ನಿಲ್ಲಿಸಿದವು. ಈಗ ಬೆಳೆದು ಬಲಶಾಲಿ ಆಗಿದ್ದರೂ ಕೂಡ ಈ ಆನೆಗಳು ಕಟ್ಟಿರುವ ಹಗ್ಗದಿಂದ ತಮಗೆ ಬಿಡಿಸಿಕೊಳ್ಳಲು ಆಗುವುದಿಲ್ಲ ಎಂಬುವುದನ್ನೇ ನಂಬುತ್ತವೆ. ಬಿಡಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ” ಎಂದರು.
ನಿಮ್ಮ ಸಾಧನೆಗೆ ಅಡ್ಡವಾಗಿ ಯಾರೋ ಹಗ್ಗ ಕಟ್ಟಿ ಎಳೆಯುತ್ತಿದ್ದಾರೆಂದರೆ ಒಂದೆರಡು ಸಲ ಹಗ್ಗದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ ಸುಮ್ಮನಾಗಬೇಡಿ. ಪ್ರಯತ್ನ ಸದಾ ಇರಲಿ.. ಒಂದು ದಿನ ಹಗ್ಗದ ಕೊಂಡಿ ಕೂಡ ಕಳಚುತ್ತದೆ ಮತ್ತು ಹಗ್ಗ ಹಿಡಿದು ಎಳೆಯುವವರ ಕೈಗೂ ಸೂಲಿನ ರುಚಿ ತಾಗುತ್ತದೆ.